ಸಾಗರ : ವೈದ್ಯಕೀಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ತಾಯಿ ಮಗು ಆಸ್ಪತ್ರೆಯಲ್ಲಿ ನಾಲ್ಕು ದಿನದ ಗಂಡು ಮಗು ಮೃತಪಟ್ಟಿದೆ ಎಂದು ಆರೋಪಿಸಿ ಕೆಳದಿಯ ಅಡ್ಡೇರಿ ವಾಸಿ ಕೃಷ್ಣಮೂರ್ತಿ ಮತ್ತು ಸವಿತಾ ದಂಪತಿಗಳು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಜು. ೭ರಂದು ಕೆಳದಿ ಗ್ರಾಮದ ಅಡ್ಡೇರಿ ವಾಸಿ ಕೃಷ್ಣಮೂರ್ತಿ ಪತ್ನಿ ಸವಿತಾ ತಾಯಿಮಗು ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದರು. ಜು. ೮ರಂದು
ಗಂಡು ಮಗು ಜನನವಾಗಿತ್ತು. ಹೆರಿಗೆ ನಂತರ ತಾಯಿಮಗು ಆರೋಗ್ಯವಾಗಿದ್ದರು. ಜು. ೧೧ರಂದು ಬೆಳಿಗ್ಗೆ ವೈದ್ಯರು ರೌಂಡ್ಸ್ಗೆ ಬಂದು ಮಗುವನ್ನು ಪರೀಕ್ಷೆ ಮಾಡಿದಾಗ ಮಗು ಉಸಿರಾಡುತ್ತಿರಲಿಲ್ಲ. ತಕ್ಷಣ ವೈದ್ಯರು ಮಗುವಿಗೆ ಸೂಕ್ತ ಚಿಕಿತ್ಸೆ ನೀಡಿದ್ದಾಗ್ಯೂ ಮಗು ಸಾವನ್ನಪ್ಪಿತ್ತು.
ವೈದ್ಯಕೀಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಲೆ ಮಗು ಮೃತಪಟ್ಟಿದೆ ಎಂದು ಪೋಷಕರು ಮತ್ತು ಸಂಬಂಧಿಕರು ಆಸ್ಪತ್ರೆ ಮುಂಭಾಗ ಮಗುವಿನ ಶವ ಇರಿಸಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ವೈದ್ಯಾಧಿಕಾರಿ ಡಾ. ಪರಪ್ಪ ಪ್ರತಿಭಟನಾನಿರತರ ಜೊತೆ ಮಾತುಕತೆ ನಡೆಸಿ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.