ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿರವರಿಗೆ ಸಮಾನ ಮನಸ್ಕ ನಾಗರಿಕ ವೇದಿಕೆಯಾದ ಶಿವಮೊಗ್ಗ ಸಿಟಿಜನ್ ಫೋರಂ ವತಿಯಿಂದ ಜೂ.೨೦ರಂದು ಸಂಜೆ ೬ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ನಾಗರೀಕ ಅಭಿನಂದನಾ ಸಮಾರಂ ಭವನ್ನು ಆಯೋಜಿಸಲಾಗಿದೆ ಎಂದು ಫೋರಂ ಅಧ್ಯಕ್ಷ ಹಾಗೂ ವಕೀಲರಾದ ಕೆ. ಬಸಪ್ಪ ಗೌಡ ಹೇಳಿದರು….
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಮಾರಂಭದ ಸಾನಿಧ್ಯ ಮತ್ತುಉದ್ಘಾಟನೆಯನ್ನು ರಾಜ್ಯಸಭಾ ಸದಸ್ಯರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ನೆರವೇರಿಸಲಿದ್ದಾರೆ. ವಿಧಾನಸಭಾ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರುಗಳಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ್ಯಾ ನಾಯ್ಕ, ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಮೇಯರ್ ಶಿವಕುಮಾರ್ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಡಾ. ಡಿ.ಹೆಚ್. ಶಂಕರಮೂರ್ತಿಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಬೆಳೆದು ಬಂದವರು. ೧೯೭೧ರಲ್ಲಿ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಪಾಲ್ಗೊಂಡವರು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯದ ಗಮನವನ್ನು ಸೆಳೆದವರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆಗೆ ಹೋದವರು ಎಂದರು..
೧೯೮೮ರಲ್ಲಿ ನೈರುತ್ಯ ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನ ಪರಿಷತ್ಗೆ ಪ್ರವೇಶ ಪಡೆದ ಇವರು, ೨೦೦೬ರ ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ೨೦ ತಿಂಗಳ ಕಾಲ ಉನ್ನತ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದರು. ಯೋಜನಾ ಆಯೋಗದ ಉಪಾಧ್ಯಕ್ಷ ರಾಗಿ ಕೆಲಸ ಮಾಡಿದ್ದಾರೆ. ಅತ್ಯಂತ ಸರಳ ವ್ಯಕ್ತಿತ್ವದ ಸಂಯಮದ ರಾಜಕಾರಣಿ. ಇದೀಗ ಸಕ್ರಿಯ ರಾಜಕಾರಣದಿಂದಲೇ ದೂರ ಸರಿದಿದ್ದಾರೆ. ಇವರನ್ನು ಸನ್ಮಾನ ಮಾಡುವುದು ನಮಗೆ ಹೆಮ್ಮೆಯಾಗಿದೆ ಎಂದರು.
ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಡಿ.ಹೆಚ್. ಶಂಕರಮೂರ್ತಿಯವರ ಅಭಿಮಾನಿಗಳು, ರೈತಮುಖಂಡರು, ವಿವಿಧ ಪಕ್ಷದ ರಾಜಕೀಯ ಮುಖಂಡರು ಸೇರಿ ರಾಜಕೀಯೇತರವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಸಿಟಿಜನ್ ಫೋರಂ ಸಮಾನ ಮನಸ್ಕರ ನಾಗರೀಕ ವೇದಿಕೆಯಾಗಿದೆ ಇಲ್ಲಿ ನ್ಯಾಯವಾದಿಗಳು ವೈದ್ಯರು, ಲೆಕ್ಕ ಪರಿಶೋಧಕರು, ಪತ್ರಕರ್ತರು, ವ್ಯಾಪಾರಿಗಳು, ಶಿಕ್ಷಣ ತಜ್ಞರು, ವಿವಿಧ ಸಂಘ ಸಂಸ್ಥೆಗಳ ಮುಖಂಡರನ್ನು ಒಳಗೊಂಡ ವೇದಿಕೆಯಾಗಿದೆ. ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು, ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತದೆ. ಮುಖ್ಯವಾಗಿ ಹಿರಿಯ ಚೇvನಗಳನ್ನು ಗುರುತಿಸುತ್ತದೆ. ವೇದಿಕೆಯ ಮೊದಲನೆಯ ಕಾರ್ಯಕ್ರಮವಾಗಿ ವಿಶ್ರಾಂತ ಜೀವನ ನಡೆಸುತ್ತಿರುವ ಡಿ.ಎಚ್. ಶಂಕರಮೂರ್ತಿಯವರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದ್ದು, ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಫೋರಂನ ಪ್ರಮುಖರಾದ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಡಾ. ಪಿ. ನಾರಾಯಣ, ಎಂ.ಎನ್. ಸುಂದರರಾಜ್, ದಿಲೀಪ್ಕುಮಾರ್ ಪಾಂಡೆ, ಕೆ.ಟಿ. ಗಂಗಾಧರ್, ಚೇತನ್. ರಮೇಶ್ಬಾಬು ಉಪಸ್ಥಿತರಿದ್ದರು.