ಶಿವಮೊಗ್ಗ: ಬಿಜೆಪಿ ಈಶ್ವರಪ್ಪನವರನ್ನು ಎಂದಿಗೂ ಕೈಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ಉನ್ನತ ಹುದ್ದೆ ಲಭಿಸಲಿದೆ. ಅವರು ಕೂಡ ಅದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಕಾಶಿ ಪೀಠದ ಶ್ರೀಗಳು ಹೇಳಿದರು.


ಅವರು ಇಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ನಿವಾಸದಲ್ಲಿ ಆಯೋಜಿಸಿದ್ದ ೭೫ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವದಿಸಿ ಮಾತನಾಡಿದರು.


ಈಶ್ವರಪ್ಪ ಅವರು ಅಪರೂಪದ ರಾಜಕಾರಣಿ. ದೇವರು ಮತ್ತು ಧರ್ಮ ಹಾಗೂ ಗುರುಗಳಲ್ಲಿ ಅಪಾರ ನಿಷ್ಠೆ ಉಳ್ಳವರು. ಬಿಜೆಪಿಯನ್ನು ಸಂಘಟನೆ ಮೂಲಕ ಕಟ್ಟಿ ರಾಜಕಾರಣಿಯಾಗಿಯೂ ಕೂಡ ಸಾಮಾಜಿಕ ಸೇವೆಗಳಲ್ಲಿ ತೊಡಗಿ ಧಾರ್ಮಿಕ ಚಟುವಟಿಕೆಗಳ ಮೂಲಕ ಗಮನಸೆಳೆದ ಅಪರೂಪದ ರಾಜಕಾರಣಿ. ಪಕ್ಷ ಅವರನ್ನು ಕೈಬಿಡಲು ಸಾಧ್ಯವೇ ಇಲ್ಲ. ಅವರಿಗೆ ಮುಂದಿನ ದಿನಗಳಲ್ಲಿ ಪಕ್ಷ ಉನ್ನತ ಹುದ್ದೆ ನೀಡುತ್ತದೆ. ಆ ಮೂಲಕ ಅವರು ಸಮರ್ಥವಾಗಿ ದೇಶ ಸೇವೆ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.


ಕೆ.ಎಸ್. ಈಶ್ವರಪ್ಪ ಮಾತನಾಡಿ, ಜನ್ಮಜನ್ಮಾಂತರದ ಭಾಗ್ಯ ನನ್ನದಾಗಿದೆ. ವಿಶ್ವಕ್ಕೆ ಶ್ರದ್ಧಾಕೇಂದ್ರ ಕಾಶಿಯಾಗಿದ್ದು, ಆ ಶ್ರೀಗಳ ಆಶೀರ್ವಾದ ಸಿಕ್ಕಿರುವುದು ನನ್ನ ಯೋಗಾಯೋಗವಾಗಿದೆ. ಶ್ರೀಗಳೇ ನನಗೆ ಆಶೀರ್ವದಿಸಲು ಬಂದಿರುವುದ ನನ್ನ ಭಾಗ್ಯ. ಬಹಳ ದಿನಗಳ ಆಸೆ ಈಡೇರಿದಂತಾಗಿದೆ. ಕುಟುಂಬದ ಎಲ್ಲಾ ಸದಸ್ಯರು ಕಾಶಿ ಪ್ರವಾಸ ಮಾಡಿದ್ದೆವು ಎಂದು ನೆನಪಿನ ಬುತ್ತಿಯನ್ನು ಹಂಚಿಕೊಂಡರು.


ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಜವಾಬ್ದಾರಿ ಕೊಡದಿದ್ದರೂ ಕೂಡ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದ ಅವರು, ಕಾಂಗ್ರೆಸ್ ಪಕ್ಷ ಅನೇಕ ಗ್ಯಾರಂಟಿಗಳನ್ನು ನೀಡಿದೆ. ಆದರೆ ಅದನ್ನು ಸಮರ್ಥವಾಗಿ ಜಾರಿ ಮಾಡಿಲ್ಲ. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ಕೊಡಬೇಕಾಗುತ್ತದೆ. ಅದನ್ನು ನೋಡಿ ಮುಂದಿನ ನಡೆಯನ್ನು ವಿರೋಧ ಪಕ್ಷವಾಗಿ ಬಿಜೆಪಿ ಚರ್ಚೆ ಮಾಡುತ್ತದೆ ಎಂದರು.


ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಜಯಲಕ್ಷ್ಮಿ ಈಶ್ವರಪ್ಪ, ಕೆ.ಈ.ಕಾಂತೇಶ್, ಮೇಯರ್ ಶಿವಕುಮಾರ್, ಪಾಲಿಕೆ ಸದಸ್ಯ ಇ. ವಿಶ್ವಾಸ್, ಎನ್.ಜೆ. ರಾಜಶೇಖರ್, ರುದ್ರಯ್ಯ ಮತ್ತಿತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!