ಸಾಗರ : ಇಲ್ಲಿನ ಖಾಸಗಿ ವಸತಿ ವಿದ್ಯಾಲಯವೊಂದರಲ್ಲಿ ಗುರುವಾರ ೧೩ ವರ್ಷದ ಬಾಲಕಿ ಆಕಸ್ಮಿಕವಾಗಿ ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಸೂಕ್ತ ತನಿಖೆ ನಡೆಸಲು ಶಾಸಕ ಗೋಪಾಲಕೃಷ್ಣ ಬೇಳೂರು ಆದೇಶ ಮಾಡಿದ್ದಾರೆ.
ಖಾಸಗಿ ವಸತಿ ವಿದ್ಯಾಲಯವೊಂದರಲ್ಲಿ ಸೊರಬ ತಾಲ್ಲೂಕಿನ ಶಿವಪುರದ ತೇಜಸ್ವಿನಿ (೧೩) ಎಂಬ ಎಂಟನೆ ತರಗತಿ ವಿದ್ಯಾರ್ಥಿನಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಬೆಳಿಗ್ಗೆ ವಿದ್ಯಾರ್ಥಿನಿ ವಸತಿ ಶಾಲೆಯಲ್ಲಿ ತೀವೃ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಶಾಲಾ ವಾಹನದಲ್ಲಿ ಉಪವಿಭಾಗೀಯ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿನಿಯ ಶವ ಪರೀಕ್ಷೆಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ವಿದ್ಯಾರ್ಥಿನಿ ಸಾವಿನ ಬಗ್ಗೆ ಮಾತನಾಡಿದ ಶಾಲಾ ಮುಖ್ಯಸ್ಥ ಎಚ್.ಪಿ.ಮಂಜಪ್ಪ, ಐದು ದಿನಗಳ ಹಿಂದೆ ೮ನೇ ತರಗತಿಗೆ ತೇಜಸ್ವಿನಿ ಅವರನ್ನು ದಾಖಲಿಸಿಕೊಳ್ಳಲಾಗಿತ್ತು. ತೇಜಸ್ವಿನಿ ಜೊತೆಗೆ ಇತರರನ್ನು ಉಚಿತ ಶಿಕ್ಷಣ ನೀಡಲು ದಾಖಲಿಸಿಕೊಳ್ಳಲಾಗಿದೆ. ಬುಧವಾರ ರಾತ್ರಿ ವಿದ್ಯಾರ್ಥಿನಿ ಸುಸ್ತು ಎಂದು ಹೇಳಿದಾಗ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಗುರುವಾರ ಬೆಳಿಗ್ಗೆ ವಿದ್ಯಾರ್ಥಿನಿ ರೂಮಿನಲ್ಲಿ ವಾಂತಿ ಮಾಡಿಕೊಂಡಿದ್ದಾಳೆ. ತಕ್ಷಣ ಅವಳನ್ನು ಉಪವಿಭಾಗೀಯ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬರಲಾಗಿದೆ.
ವಿದ್ಯಾರ್ಥಿನಿ ಬಂದು ಐದು ದಿನವಾಗಿರುವುದರಿಂದ ಅವಳ ಬಗ್ಗೆ ಹೆಚ್ಚಿನ ಮಾಹಿತಿ ನಮ್ಮ ಬಳಿ ಇಲ್ಲ. ಸಾವಿಗೆ ನಿಖರ ಕಾರಣ ಏನೆಂದು ತಿಳಿದುಕೊಳ್ಳಲು ವೈದ್ಯರು ಪೋಸ್ಟ್‌ಮಾರ್ಟಂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಸುವುದಾಗಿ ತಿಳಿಸಿದ್ದಾರೆ. ಪೊಲೀಸರ ತನಿಖೆಗೆ ನಮ್ಮ ಸಂಸ್ಥೆ ಎಲ್ಲ ರೀತಿಯ ಸಹಕಾರ ನೀಡುತ್ತದೆ. ನಮ್ಮ ವಿದ್ಯಾರ್ಥಿ ನಿಲಯದಲ್ಲಿ ಯಾವುದೇ ಲೋಪವಾಗಿಲ್ಲ. ಪೋಸ್ಟ್‌ಮಾರ್ಟ ವರದಿ ನಂತರ ಸತ್ಯಾಂಶ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ತನಿಖೆಗೆ ಆದೇಶ : ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಗೋಪಾಲಕೃಷ್ಣ ಬೇಳೂರು ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಸ್ವಾಂತ್ವಾನ ಹೇಳಿ, ೧೩ ವರ್ಷದ ಹೆಣ್ಣುಮಗಳು ಮೃತಪಟ್ಟಿರುವುದರಿಂದ ಪೋಷಕರು ಮತ್ತವರ ಸಂಬಂಧಿಕರು ತೀವೃ ದುಃಖದಲ್ಲಿದ್ದಾರೆ. ಪೋಷಕರು ಈ ಸಂಬಂಧ ಪ್ರಕರಣ ದಾಖಲಿಸುತ್ತೇವೆಂದು ತಿಳಿಸಿದ್ದಾರೆ. ಪೊಲೀಸರಿಗೆ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿವಿಲ್ ಸರ್ಜನ್ ಡಾ. ಪರಪ್ಪ ಕೆ., ಡಾ. ಪ್ರಕಾಶ್ ಬೋಸ್ಲೆ ಇನ್ನಿತರರು ಹಾಜರಿದ್ದರು.