: ರೈತ ಸ್ವಾವಲಂಬಿಯಾಗಿ ಬದುಕಬೇಕು. ರಾಜ್ಯ ಸರ್ಕಾರ ರೈತರ ಶ್ರೇಯೋಭಿವೃದ್ದಿಗೆ ಪೂರಕವಾದ ಎಲ್ಲ ಯೋಜನೆಗಳನ್ನು ಅನುಷ್ಟಾನಕ್ಕೆ ತರಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.


ಇಲ್ಲಿನ ಕೃಷಿ ಇಲಾಖೆ ವತಿಯಿಂದ ಗುರುವಾರ ೨೦೨೩-೨೪ನೇ ಸಾಲಿನ ಮುಂಗಾರು ಹಂಗಾಮಿನ ಸಹಾಯಧನದದಲ್ಲಿ ಬಿತ್ತನೆಬೀಜ ವಿತರಣೆ ಮಾಡಿ ಅವರು ಮಾತನಾಡುತ್ತಾ, ರೈತರು ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ನಿಮ್ಮ ಜೊತೆ ಇರುತ್ತದೆ ಎಂದು ಹೇಳಿದರು.


ತಾಲ್ಲೂಕಿನ ಬೇರೆಬೇರೆ ಭಾಗಗಳಿಂದ ತಮ್ಮ ಕೆಲಸಕ್ಕೆ ಬರುವ ರೈತರನ್ನು ಇಲಾಖೆ ಅಧಿಕಾರಿಗಳು ಗೌರವದಿಂದ ನಡೆಸಿಕೊಳ್ಳಬೇಕು. ರೈತ ಹರಕು ಅಂಗಿ ಹಾಕಿಕೊಂಡು ಬಂದಿದ್ದಾನೆಂದು ಅವನನ್ನು ಕಡೆಗಣಿಸಿದರೆ ಸಹಿಸಿಕೊಳ್ಳುವುದಿಲ್ಲ. ಸಬ್ಸಿಡಿ ದರದಲ್ಲಿ ರೈತರಿಗೆ ಯಾವೆಲ್ಲಾ ಸೌಲಭ್ಯ ಸಿಗುತ್ತದೆಯೋ ಅದನ್ನು ಪ್ರಾಮಾಣಿಕವಾಗಿ ತಲುಪಿಸಿ. ಬಿತ್ತನೆಬೀಜ ಕೊರತೆಯಾಗದಂತೆ ಅಗತ್ಯ ದಾಸ್ತಾನು ಮಾಡಿಕೊಳ್ಳಲು ಸಲಹೆ ನೀಡಿದ ಶಾಸಕರು, ಖಾಸಗಿ ಗೊಬ್ಬರ ಅಂಗಡಿಗಳಲ್ಲಿ ರೈತರಿಂದ ಹೆಚ್ಚಿನ ದರ ವಸೂಲಿ ಮಾಡಿದರೆ ಸೂಕ್ತ ತನಿಖೆ ನಡೆಸಿ ಅಂತಹ ಅಂಗಡಿ ಮಾಲೀಕರ ವಿರುದ್ದ ಕಾನೂನುಕ್ರಮ ಜರುಗಿಸಲು ಸೂಚನೆ ನೀಡಿದರು.


ನಿಗಧಿತ ಸಮಯದಲ್ಲಿ ಮಳೆ ಪ್ರಾರಂಭವಾಗದೆ ಇರುವುದರಿಂದ ರೈತರು ಬಿತ್ತನೆ ಕೆಲಸ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಎಲೆಚುಕ್ಕೆ ರೋಗದಿಂದ ಅಡಿಕೆ ಬೆಳೆಗಾರರು ದೊಡ್ಡ ಪ್ರಮಾಣದಲ್ಲಿ ತಮ್ಮ ಫಸಲು ಕಳೆದುಕೊಂಡಿದ್ದಾರೆ. ಫಸಲು ಕಳೆದು ಕೊಂಡ ಬೆಳೆಗಾರರಿಗೆ ಈತನಕ ಪರಿಹಾರ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಮಲೆನಾಡಿನ ತೋಟಗಳಿಗೆ ಎಲೆಚುಕ್ಕೆ

ರೋಗ ಬಾಧಿಸದಂತೆ ಅಗತ್ಯ ಕ್ರಮ ಕೈಗೊಳ್ಳಲು ಕೃಷಿ ಸಚಿವರ ಜೊತೆಗೆ ಮಾತುಕತೆ ನಡೆಸಲಾಗುತ್ತದೆ. ಸಂದರ್ಭ ಬಂದರೆ ಕೃಷಿ ಮತ್ತು ತೋಟಗಾರಿಕಾ ಸಚಿವರನ್ನು ಕ್ಷೇತ್ರಕ್ಕೆ ಬರಮಾಡಿಕೊಂಡು ರೈತರ ಜೊತೆ ಸಮಾಲೋಚನೆ ನಡೆಸಲು ವೇದಿಕೆ ಸಜ್ಜುಗೊಳಿಸಲಾಗುತ್ತದೆ ಎಂದು ಹೇಳಿದರು.


ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು, ಪ್ರಮುಖರಾದ ಮನೋಜ್ ಜನ್ನೆಹಕ್ಲು, ಮಹಾಬಲ ಕೌತಿ, ಸಂತೋಷ್ ಸದ್ಗುರು, ವಸೀಂ ಉಳ್ಳೂರು, ಆನಂದ್ ಐಗಿನಬೈಲು, ಶಿವಪ್ರಕಾಶ್ ಇನ್ನಿತರರು ಹಾಜರಿದ್ದರು. ಸಹಾಯಕ ಕೃಷಿ ನಿರ್ದೇಶಕ ಕಾಶಿನಾಥ ಒಂಟಕರ್ ವೈ. ಸ್ವಾಗತಿಸಿದರು. ಉಪ ಕೃಷಿ ನಿರ್ದೇಶಕ ಡಿ.ಎಂ.ಬಸವರಾಜ್ ಪ್ರಾಸ್ತಾವಿಕ ಮಾತನಾಡಿದರು. ಐ.ಡಿ.ಗಣಪತಿ ವಂದಿಸಿದರು. ವಿನಾಯಕ ಬೇಳೂರು ನಿರೂಪಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!