ಸಾಗರ : ತಾಲ್ಲೂಕಿನಲ್ಲಿ ಪತ್ರಕರ್ತರು ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿ ಮಾಡಲಾಗುತ್ತದೆ. ನಿಷ್ಪಕ್ಷಪಾತವಾಗಿ ವರದಿ ಮಾಡುವ ಪತ್ರಕರ್ತರ ತಂಟೆಗೆ ಯಾರೇ ಹೋದರೂ ಸಹಿಸಿಕೊಂಡು ಇರುವುದಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಗುರುತಿನ ಚೀಟಿ ವಿತರಣೆ ಮಾಡಿ, ಸಂಘದ ವತಿಯಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.
ಬೇಳೂರು ಕಡೆಯಿಂದ ಪತ್ರಕರ್ತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ನಿಮ್ಮ ಜೊತೆ ಸ್ನೇಹಿತನಾಗಿ ಇರುತ್ತೇನೆ. ಸಾಗರ ಕ್ಷೇತ್ರದ ಅಭಿವೃದ್ದಿಗೆ ಮಾಧ್ಯಮದವರ ಸಲಹೆ ಸಹಕಾರ ಅಗತ್ಯವಾಗಿದೆ. ನನ್ನನ್ನು ಸೇರಿದಂತೆ ಯಾರೇ ತಪ್ಪು ಮಾಡಿದರೂ ನಿರ್ಭಯವಾಗಿ ಬರೆಯಿರಿ ಎಂದು ತಿಳಿಸಿದರು.
ಸಾಗರವನ್ನು ಮಾದರಿಯಾಗಿ ರೂಪಿಸುವ ನಿಟ್ಟಿನಲ್ಲಿ ಅನೇಕ ಯೋಜನೆಯನ್ನು ರೂಪಿಸಲಾಗಿದೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಸುಸಜ್ಜಿತವಾದ ರಂಗಮಂದಿರ, ನೆನಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿಗೆ ಪುನರ್ ಚಾಲನೆ, ತಹಶೀಲ್ದಾರ್ ಕಚೇರಿ ಲೋಕಾರ್ಪಣೆ, ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸದ್ಯದಲ್ಲಿಯೆ ಗಣ್ಯರು, ಸಂಘ ಸಂಸ್ಥೆಗಳ ಪ್ರಮುಖರು ಇನ್ನಿತರರನ್ನು ಒಳಗೊಂಡ ಸಮಾಲೋಚನಾ ಸಭೆ ಕರೆದು ಊರಿನ ಅಭಿವೃದ್ದಿ ಕುರಿತು ನೀಲನಕ್ಷೆ ತಯಾರಿಸಲಾಗುತ್ತದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಜಿ.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಲೋಕೇಶಕುಮಾರ್, ಸಹ ಕಾರ್ಯದರ್ಶಿ ಸಂತೋಷ ಕುಮಾರ್, ಖಜಾಂಚಿ ಎಂ.ಜಿ.ರಾಘವನ್ ಇನ್ನಿತರರು ಹಾಜರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗಡೆ ಸ್ವಾಗತಿಸಿದರು. ಎಂ.ರಾಘವೇಂದ್ರ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ರವಿ ನಾಯ್ಡು ವಂದಿಸಿದರು. ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್ ನಿರೂಪಿಸಿದರು.