ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮೇ.18 ರಿಂದ 31 ರವರೆಗೆ ವಿವಿಧ ದತ್ತಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮೇ. 18 ರಂದು ಬೆಳಿಗ್ಗೆ 11:00 ಕ್ಕೆ ನಗರದ ಗಾರ್ಡನ್ ಏರಿಯಾದ ಎರಡನೇ ತಿರುವಿನಲ್ಲಿರುವ ಜಿ.ಜೆ. ಸೂರ್ಯ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ಡಾ.ಕೆ.ಆರ್. ಶ್ರೀಧರ ಅವರು ಶ್ರೀ ರಾಮಭಟ್ಟ ಮತ್ತು ಶ್ರೀಮತಿ ದೇವಕಮ್ಮ ಅವರ ಹೆಸರಿನಲ್ಲಿ ನೀಡಿರುವ ದತ್ತಿ ಆಶಯದಂತೆ ನಿಮ್ಮ ಹೃದಯದ ಆರೋಗ್ಯ ಕುರಿತು ಸಹ್ಯಾದ್ರಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಪಿ.ಕೆ. ಪೈ ಅವರು ಮಾತನಾಡಲಿದ್ದಾರೆ.
ಇದೇ ವೇದಿಕೆಯಲ್ಲಿ ನಗರದ ಮಿಷನ್ ಕಾಂಪೌಂಡ್ ನಿವಾಸಿಗಳಾದ ಡಾ.ಎಚ್. ಶಿವಲಿಂಗಪ್ಪ ಅವರು ನೀಡಿರುವ ಲಿಂಗೈಕ್ಯ ಎಚ್ಚಪ್ಪರ ಎಚ್ಚಜ್ಜ ಮತ್ತು ಎಚ್ಚಪ್ಪರ ಹನುಮಮ್ಮ ದತ್ತಿ ಆಶಯದಂತೆ ವಚನಕಾರರ ವಚನಗಳ ಕೊಡುಗೆ ಹಾಗೂ ಮಡಿವಾಳ ಮಾಚಿದೇವರ ವಚನಗಳು ಕುರಿತು ಭದ್ರಾವತಿಯ ಹಿರಿಯ ಸಾಹಿತಿಗಳಾದ ಜಿ. ವಿ. ಸಂಗಮೇಶ್ವರ ಅವರು ಮಾತನಾಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ವೈದ್ಯ ಡಾ.ಕೆ.ಆರ್. ಶ್ರೀಧರ ಉದ್ಘಾಟಿಸಲಿದ್ದಾರೆ. ಸೂರ್ಯ ನರ್ಸಿಂಗ್ ಕಾಲೇಜು ಚೇರ್ಮನ್ ಡಾ.ನೇತ್ರಾವತಿ ಟಿ., ಪ್ರಿನ್ಸಿಪಾಲ್ ಶ್ರೀಜಾ ಎಂ. ಎಸ್.ಭಾಗವಹಿಸಲಿದ್ದಾರೆ.
ಮೇ.18. ಗುರುವಾರ ಮಧ್ಯಾಹ್ನ 3:00 ಕ್ಕೆ ಕಮಲಾ ನೆಹರು ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬಾಪೂಜಿ ನಗರದ ನಿವಾಸಿಗಳಾದ ಡಾ.ನೂರ್ ಸಮದ್ ಅಬ್ಬಲಗೆರೆ ಅವರು ದಿ. ಅಬ್ಬಾಸ್ ಅಬ್ಬಲಗೆರೆ ಅವರ ಹೆಸರಿನಲ್ಲಿ ನೀಡಿದ ದತ್ತಿಯ ಆಶಯದಂತೆ ‘ಭಾವೈಕ್ಯತೆಗೆ ಸಾಹಿತ್ಯದ ಕೊಡುಗೆ’ ವಿಚಾರವಾಗಿ ಸಾಹಿತಿಗಳು, ಪ್ರಾಧ್ಯಾಪಕರಾದ ಡಾ.ಮೇಟಿ ಮಲ್ಲಿಕಾರ್ಜುನ ಮಾತನಾಡಲಿದ್ದಾರೆ. ಗಾಂಧಿ ಬಜಾರ್ ನಿವಾಸಿಗಳಾದ ಜಿನರಾಜ್ ಜೈನ್ ಗೆಳೆಯರ ಬಳಗ ನೀಡಿರುವ ದಿ.ಎಂ. ಜಿನರಾಜು
ಹೆಗಡೆ ಸ್ಮಾರಕ ದತ್ತಿಯ ಆಶಯದಂತೆ ನಾಣ್ಯಗಳು, ಛಾಯಾಚಿತ್ರ ಕಲೆಗೆ ಜಿನರಾಜು ಹೆಗಡೆ ಅವರ ಕೊಡುಗೆ ಕುರಿತು ಇತಿಹಾಸ ಉಪನ್ಯಾಸಕರಾದ ಡಾ. ಕೆ.ಜಿ. ವೆಂಕಟೇಶ್ ಮಾತನಾಡಲಿದ್ದಾರೆ. ಕಸಾಪ ಅಧ್ಯಕ್ಷರಾದ ಡಿ.ಮಂಜುನಾಥ ಉದ್ಘಾಟಿಸಲಿದ್ದಾರೆ. ಕಾಲೇಜು ಪ್ರಿನ್ಸಿಪಾಲ್ ಡಾ.ಎಚ್. ಎಸ್. ನಾಗಭೂಷಣ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಆರಡಿ ಮಲ್ಲಯ್ಯ, ದತ್ತಿ ದಾನಿಗಳು ಭಾಗವಹಿಸಲಿದ್ದಾರೆ.