ನಗರದ ವಿವಿಧ ಸಂಘಟನೆಗಳು ಇಂದು ಪತ್ರಿಕಗೋಷ್ಠಿಗಳಲ್ಲಿ ಮಾತನಾಡಿ, ಬಿಜೆಪಿಯನ್ನು ಬೆಂಬಲಿಸುವ ನಿರ್ಧಾರವನ್ನು ತೆಗೆದುಕೊಂಡಿವೆ.
ಅಖಿಲಭಾರತ ಅಣ್ಣಾ ಡಿಎಂಕೆ: ಪಕ್ಷದ ಜಿಲ್ಲಾ ಕಾರ್ಯದರ್ಶಿ ಎ. ನಾರಾಯಣಸ್ವಾಮಿ ಮಾತನಾಡಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡು ವಿರೋಧ ಪಕ್ಷದ ನಾಯಕರಾದ ಪಳನಿಸ್ವಾಮಿ ಆದೇಶದ ಮೇರೆಗೆ ಮತ್ತು ರಾಜ್ಯ ಕಾರ್ಯದರ್ಶಿ ಎಸ್.ಟಿ. ಕುಮಾರ್ ಅವರ ನಿರ್ದೇಶನದಂತೆ ನಾವು ಈ ಬಾರಿ ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲೂ ಕೂಡ ಎಲ್ಲಾ ಏಳು ವಿಧಾನಸಭಾ ಕ್ಷೇತ್ರದಲ್ಲೂ ನಮ್ಮ ಪಕ್ಷಬ ಬಿಜೆಪಿಗೆ ಬೆಂಬಲ ನೀಡಿರುತ್ತದೆ. ಈ ಕುರಿತಂತೆ ಚುನಾವಣಾ ಪ್ರಭಾರಿ ಧರ್ಮೇಂದ್ರ ಪ್ರಧಾನ ಹಾಗೂ ಕೆ. ಅಣ್ಣಾಮಲೈ ಅವರು ತೀರ್ಮಾನಿಸಿ ನಮಗೆ ತಿಳಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎನ್. ಶೇಖರ್, ಎಂ. ಆನಂದ್, ಎಂ. ಅರುಣ್‌ಕುಮಾರ್, ಜೆ. ಶೇಖರ್ ಇದ್ದರು.
ಕೇರಳ ಸಮಾಜ: ನಮ್ಮ ಸಮಾಜಕ್ಕೆ ಶಾಸಕ ಕೆ.ಎಸ್. ಈಶ್ವರಪ್ಪ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದು, ಅದೇರೀತಿ ವಾಜಪೇಯಿ ಬಡಾವಣೆಯಲ್ಲಿ ನಿವೇಶನ ದೊರಕಿಸಿಕೊಟ್ಟು, ೧.೬೫ಕೋಟಿ ರೂ. ಅನುದಾನ ನೀಡಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ. ಸರ್ಕಾರದಿಂದ ಹಲವು ಸೌಲಭ್ಯಗಳನ್ನು ದೊರಕಿಸಿಕೊಟ್ಟಿದ್ದಾರೆ. ಇದಕ್ಕಾಗಿ ಈ ಬಾರಿ ಚುನಾವಣೆಯಲ್ಲಿ ನಮ್ಮ ಸಮಾಜ ಬಿಜೆಪಿಗೆ ಬೆಂಬಲಿಸಲು ನಿರ್ಧಾರ ಕೈಗೊಂಡಿದೆ ಎಂದು ಸಮಾಜದ ಅಧ್ಯಕ್ಷ ಪ್ರದೀಪ್ ಮಿತ್ಥಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿ.ಗಿರೀಶ್‌ಕುಮಾರ್, ಶಿವಕುಮಾರ್, ಜಾನ್ ಮಾಥ್ಯೂ, ರವಿಕುಮಾರ್, ಸುಬ್ರಹ್ಮಣ್ಯ, ರವೀಂದ್ರನ್ ಇತರರಿದ್ದರು.
ಕರ್ನಾಟಕ ಮಾದಿಗ ದಂಡೋರ: ಬಿಜೆಪಿ ಸರ್ಕಾರ ಒಳಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು ಸ್ವಾಗತಾರ್ಹ. ಅದ್ದರಿಂದ ನಮ್ಮ ಸಮಾಜ ಈ ಬಾರಿ ಬಿಜೆಪಿಯನ್ನು ಬೆಂಬಲಿಸಲಿದೆ ಎಂದು ಕರ್ನಾಟಕ ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ತಿಮ್ಲಾಪುರ ಲೋಕೇಶ್ ತಿಳಿಸಿದರು.
ರಾಜ್ಯದ ೨೨೪ ಕ್ಷೇತ್ರದಲ್ಲೂ ಸಹ ಬಿಜೆಪಿ ಬೆಂಬಲಿಸಿ ಅವರ ಗೆಲುವಿಗೆ ಶ್ರಮಿಸುತ್ತದೆ. ಸಮಾಜ ಬಾಂಧವರು ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್, ರಾಜಣ್ಣ, ಮಂಜಣ್ಣ, ಸಿ,ಮೂರ್ತಿ, ಗಿರೀಶ್, ಹೆಚ್.ಎನ್. ಪ್ರಭು, ರಘು, ರಂಗಣ್ಣ ಇನ್ನಿತರರು ಇದ್ದರು.