ಶಿವಮೊಗ್ಗ:  ಕಾರ್ಮಿಕರಿಗೆ ಮತದಾನ ಮಾಡಲು ಕಡ್ಡಾಯವಾಗಿ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಉದ್ದಿಮೆಗಾರರು ಹಾಗೂ ಕೈಗಾರಿಕೋದ್ಯಮಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕಾರ್ಮಿಕರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಟ್ಟು ಹೆಚ್ಚಿನ ಮತದಾನ ಆಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ “ಚುನಾವಣೆ, ಮತದಾನ, ಜವಾಬ್ದಾರಿ” ಸಂವಾದ ಕಾಯಕ್ರಮದಲ್ಲಿ ಮಾತನಾಡಿದರು.

ಸಿ ವಿಜಿಲ್ ಆಪ್ಲಿಕೇಷನ್‌ ಬಿಡುಗಡೆ ಮಾಡಿದ್ದು, ಕಾರ್ಮಿಕರು ತನಗೆ ಮತದಾನ ಮಾಡಲು ಅವಕಾಶ ನೀಡುತ್ತಿಲ್ಲವೆಂದು ದೂರು ಸಲ್ಲಿಸಿದರೆ ಅಂತ ಮಾಲೀಕರ ವಿರುದ್ಧ ಕೇಸು ದಾಖಲಿಸಿ ಕ್ರಮಕೈಗೊಳ್ಳಬಹುದು. 1903 ಸಹಾಯವಾಣಿಗೆ  ಕರೆ ಮಾಡಬಹುದು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ಅತಿ ಹೆಚ್ಚಿನ ಮತದಾನ ನಡೆಯಬೇಕು. ಜಿಲ್ಲೆಯ ಪ್ರತಿಯೊಂದು ಸಂಘ ಸಂಸ್ಥೆಗಳು ಹೆಚ್ಚಿನ ಮತದಾನ ಆಗುವಂತೆ ಸ್ವಯಂ ಪ್ರೇರಿತರಾಗಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ರಾಜ್ಯದಲ್ಲಿ ಶಿವಮೊಗ್ಗ ನಂಬರ್‌ ಒನ್‌ ಸ್ಥಾನದಲ್ಲಿರಲು ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಚುನಾವಣೆ ಪ್ರಜಾಪ್ರಭುತ್ವದ ಹಬ್ಬ, ನಾವು ಹಬ್ಬ ಆಚರಿಸಿದಂತೆ ಚುನಾವಣೆಯನ್ನು ನಡೆಸಿ ಸಂವಿಧಾನದತ್ತವಾದ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಮತದಾರರು ಹೆಚ್ಚಿನ ಮತ ಚಲಾಯಿಸಿದಾಗ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬಹುದು ಎಂದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್‌ ಮಾತನಾಡಿ, ಮತದಾನದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ. ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಅತಿ ಹೆಚ್ಚಿನ ಪ್ರಮಾಣದ ಮತದಾನ ಆಗುವಂತೆ ಸ್ಥಳೀಯ ಭಾಗಗಳಲ್ಲಿ ಅರಿವು ಮೂಡಿಸಬೇಕು. ಕಾರ್ಮಿಕರು ಕಡ್ಡಾಯ ಮತದಾನದಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಬೇಕು ಎಂದರು.

ಎಂಟು ಸಾವಿರಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿರುವ ಸಂಸ್ಥೆಯು ವಾಣಿಜ್ಯೋದ್ಯಮಿ ಹಾಗೂ ಕೈಗಾರಿಕೋದ್ಯಮಿಗಳಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ನಂತರ ಚುನಾವಣಾ ಬಗ್ಗೆ ಪ್ರಶ್ನೆ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ್‌, ಸಂಘದ ನಿರ್ದೇಶಕರಾದ ಗಣೇಶ್ ಅಂಗಡಿ, ಪ್ರದೀಪ್ ಎಲಿ , ಮರಿಸ್ವಾಮಿ, ಪರಮೇಶ್ವರ್, ಉದಯಕುಮಾರ್, ಸುಕುಮಾರ್, ಮಧುಸೂದನ ಐತಾಳ, ಮಾಚನಳ್ಳಿ ಕೈಗಾರಿಕ ಸಂಘದ ಪರಮೇಶ್ವರ್, ದಿನಸಿ ವರ್ತಕರ ಸಂಘದ ಹಾಲಸ್ವಾಮಿ, ಟಾಕ್ಸ್ ಬಾರ್ ಅಸೋಸಿಯೇಷನ್‌ , ಆಟೋ ಕಾಂಪ್ಲೆಕ್ಸ್ ಕುಮಾರ ಶಾಸ್ತ್ರಿ ಹಾಗೂ ಸಂಯೋಜಿತ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!