ಶಿವಮೊಗ್ಗ,ಏ.19:
ಹೋಗಿ ಹೋಗಿ ಶಿವಮೊಗ್ಗ ಬಿಜೆಪಿ ವಿಷ್ಯದಲ್ಲಿ ಆ ಪಕ್ಷಕ್ಕೆ ಇಂತಹ ಸ್ಥಿತಿ ಬರಬಾರದಿತ್ತು. ನಾಮಪತ್ರ ಸಲ್ಲಿಕೆಯ ನಾಳಿನ ಕೊನೆಯ ದಿನದ ತನಕ ಅಭ್ಯರ್ಥಿಯ ಹೆಸರನ್ನು ಹೇಳಲು ಸಂಕೋಚ, ಮುಜುಗರ, ಭಯಪಡುತ್ತಿರುವಂತಹ ಪರಿಸ್ಥಿತಿ ನಿಜಕ್ಕೂ ಬಿಜೆಪಿಗೆ ಬರಬಾರದಾಗಿತ್ತು.
ತನ್ನ ಪಕ್ಷದ ಅಭ್ಯರ್ಥಿಗಳನ್ನು ಅಂದರೆ ಆಕಾಂಕ್ಷಿತರನ್ನು ಉಳಿಸಿಕೊಳ್ಳಲು ಆಗುವುದಿಲ್ಲ ಎಂಬ ಭಯದಿಂದ ಅಭ್ಯರ್ಥಿಯ ಹೆಸರನ್ನು ಹೇಳದೆ ನಾಳೆ ಬೆಳಿಗ್ಗೆ 10.30 ಕ್ಕೆ ನಾಮಪತ್ರ ಸಲ್ಲಿಕೆ ಸಮಾರಂಭಕ್ಕೆ ಮಾಧ್ಯಮದವರಿಗೆ ಆಹ್ವಾನ ನೀಡಿದ್ದಾರೆ. ಪಾಪ ಅನ್ಸುತ್ತೆ.
ಇಲ್ಲಿಯವರೆಗೂ ಅಭ್ಯರ್ಥಿ ಹೆಸರನ್ನು ಹೇಳಲು ಬಿಜೆಪಿ ಇಷ್ಟೊಂದು ಮುಜುಗರ ಪಡುತ್ತಿರುವುದು ಯಾಕೆ? ಅಭ್ಯರ್ಥಿ ಹೆಸರು ಹೇಳಿದರೆ ಅಂತಹ ಅನಾಹುತ ನಡೆಯುವುದಾದರೂ ಏನಿದೆ? ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಅವರು ಈಗಾಗಲೇ ಬಿಜೆಪಿಗೆ ರಾಜೀನಾಮೆ ಸಲ್ಲಿಸಿ ಅಧಿಕೃತವಾಗಿ ಜೆಡಿಎಸ್ ಸೇರಿದ್ದಾರೆ. ನಾಳೆ ನಾಮಪತ್ರ ಸಲ್ಲಿಸಲು ಪಕ್ಷದ ಬಿ ಫಾರಂ ಸಹ ಪಡೆದು ಬಂದಿದ್ದಾರೆ. ಆದರೆ ಬಿಜೆಪಿ ಮಾತ್ರ ಇನ್ನೂ ವಿಷಯದಲ್ಲಿ ವಿಳಂಬ ನೀತಿ ಅನುಸರಿಸಿರುವುದಾದರೂ ಯಾಕೆ?
ಒಂದೆಡೆ ಮಾಜಿ ಮೇಯರ್ ಚನ್ನಬಸಪ್ಪ ಹೆಸರು ಹೇಳಿ ಸಿದ್ಧವಾಗಲು ಸೂಚಿಸಿದ್ದು ಯಾಕೆ? ಕಾಂತೇಶ್ ಅಭ್ಯರ್ಥಿಯಾ? ಡಾ. ಧನಂಜಯ ಸರ್ಜಿ, ಜ್ಯೋತಿ ಪ್ರಕಾಶ್ ನಿಜ ಕ್ಯಾಂಡಿಡೇಟಾ? ಪಟ್ಟಿ ಬೆಟ್ಟದಷ್ಟು ಬೆಳೆಯುತ್ತಿದೆ.
ಈ ನಡುವೆ ಈಗಲೂ ಅಭ್ಯರ್ಥಿ ಹೆಸರು ಹೇಳಲು ಮುಜುಗರ ಪಟ್ಟು ಶಿವಮೊಗ್ಗ ನಗರ ಬಿಜೆಪಿಯ ಅಧ್ಯಕ್ಷ ಜಗದೀಶ್ ನಾಳೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯ ಮೆರವಣಿಗೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರ ಹೆಸರನ್ನು ಸೂಚಿಸಿದ್ದಾರೆ. ಅಭ್ಯರ್ಥಿ ಹೆಸರು ಮಾತ್ರ ನಿಗೂಢವಾಗಿದೆ.
ಈಶ್ವರಪ್ಪ ಅವರ ಮನವೊಲಿಕೆಯ ಪ್ರಯುತ್ನ ನಡೆಯುತ್ತಿದೆಯೇ? ಕೇಂದ್ರ ಹೈ ಕಮಾಂಡ್ ಶಿವಮೊಗ್ಗದ ಈ ವಿಚಾರದಲ್ಲಿ ಇಷ್ಟೊಂದು ಆಟವಾಡಬಾರದಿತ್ತು ಅಲ್ಲವೇ?