ಸಾಗರ : ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದ್ದು ನಾಮಪತ್ರ ಸಲ್ಲಿಕೆ ಕೇಂದ್ರದ ಸುತ್ತಮುತ್ತ ಬಿಗಿ ಬಂದೋಬಸ್ತು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಉಪಾಧೀಕ್ಷಕ ರೋಹನ್ ಜಗದೀಶ್ ತಿಳಿಸಿದರು.


ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿಯ ನಾಮಪತ್ರ ಸಲ್ಲಿಕೆ ಕೇಂದ್ರದ ಬಳಿ ಬುಧವಾರ ಬಂದೋಬಸ್ತು ಪರಿಶೀಲನೆ ನಡೆಸಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅಭ್ಯರ್ಥಿ ಜೊತೆಗೆ ನಾಲ್ಕು ಜನರು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಿರಬಹುದು ಎಂದು ಹೇಳಿದರು.


ನಾಮಪತ್ರ ಕೇಂದ್ರದಿಂದ ೧೦೦ ಮೀಟರ್ ಅಂತರದಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಏ. ೧೩ರಿಂದ ೨೦ರವರೆಗೆ ಈ ರಸ್ತೆಯಲ್ಲಿ ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೩ರವರೆಗೆ ಯಾರಿಗೂ ಪ್ರವೇಶ ಇರುವುದಿಲ್ಲ. ತುರ್ತು ಸಂದರ್ಭದಲ್ಲಿ ಅಂಬ್ಯುಲೆನ್ಸ್, ವೃದ್ದರು ಇನ್ನಿತರೆ ಅಗತ್ಯ ಕೆಲಸ ಇದ್ದವರಿಗೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನಾಮಪತ್ರ ಸಲ್ಲಿಸುವವರ ಜೊತೆ ಗನ್‌ಮ್ಯಾನ್ ಹೋಗುವಂತಿಲ್ಲ. ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂದು ತಿಳಿಸಿದರು.


ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ಬರುವಾಗ ಮೆರವಣಿಗೆ ಮಾಡುವವರು ಮೊದಲೇ ಪರವಾನಗಿ ತೆಗೆದುಕೊಳ್ಳಬೇಕು. ಪರವಾನಿಗೆಯನ್ನು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಏಕಗವಾಕ್ಷಿ ಅಡಿ ಪಡೆಯಬಹುದು. ಬಂದೋಬಸ್ತುಗೆ ಅಗತ್ಯವಾದ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಗಣಪತಿ ಬ್ಯಾಂಕ್ ಸರ್ಕಲ್, ನ್ಯಾಯಾಲಯ ಬಲಭಾಗದ ವೃತ್ತಕ್ಕೆ ಬ್ಯಾರಿಕೇಡ್ ಹಾಕಲಾಗಿದೆ ಎಂದು ಹೇಳಿದರು.
ವೃತ್ತ ನಿರೀಕ್ಷಕರಾದ ಪ್ರವೀಣಕುಮಾರ್, ಕೆ.ವಿ.ಕೃಷ್ಣಪ್ಪ, ಸೀತಾರಾಮ್, ಸಬ್ ಇನ್ಸ್‌ಪೆಕ್ಟರ್ ತಿರುಮಲೇಶ್ ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!