ಶಿವಮೊಗ್ಗ: ತಮ್ಮ ರಾಜಕೀಯ ನಿವೃತ್ತಿ ಕುರಿತಾಗಿ ರಾಷ್ಟಾçಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ತಾವು ಪತ್ರ ಬರೆದಿರುವುದು ನಿಜ ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ತಮ್ಮ ಸ್ವಗೃಹದಲ್ಲಿ ಮಾತನಾಡಿದ ಅವರು, ಪತ್ರ ಬರೆದಿರುವುದು ನಿಜ. ಅದನ್ನು ರಾಷ್ಟಾçಧ್ಯಕ್ಷರು ಅಂಗೀಕರಿಸಬೇಕು. ಅಲ್ಲದೇ, ಚುನಾವಣೆಯ ಜವಾಬ್ದಾರಿ ನೀಡಿದರೆ ಅದನ್ನು ನಿರ್ವಹಿಸಲು ಸಿದ್ದನಿದ್ದೇನೆ ಎಂದಿದ್ದಾರೆ.
ಕಾರ್ಯಕರ್ತರು ಇದಕ್ಕೆ ಒಪ್ಪುವುದಿಲ್ಲ ಎಂದು ತಮಗೆ ತಿಳಿದಿತ್ತು. ಹೀಗಾಗಿ, ಯಾರೊಂದಿಗೂ ಚರ್ಚೆ ಮಾಡಲಿಲ್ಲ. ತಮ್ಮ ಈ ನಿರ್ಧಾರದಿಂದ ಕ್ಷೇತ್ರದಲ್ಲಿ ಬಿಜೆಪಿಗೆ ಯಾವುದೇ ತೊಂದರೆಯಾಗುವುದಿಲ್ಲ. ಲಕ್ಷ ಲಕ್ಷ ಕಾರ್ಯಕರ್ತರು ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಅವರೆಲ್ಲ ಶ್ರಮ ಫಲ ನೀಡಲಿದೆ ಎಂದಿದ್ದಾರೆ.
ತಮ್ಮ ಉತ್ತರಾಧಿಕಾರಿ ಕುರಿತಾಗಿ ಮಾತನಾಡಿದ ಅವರು, ವರಿಷ್ಠರು ಹಾಗೂ ಚುನಾವಣಾ ಸಮಿತಿ ಏನು ನಿರ್ಧಾರ ಕೈಗೊಳ್ಳುತ್ತದೆ ಅದಕ್ಕೆ ಎಲ್ಲರೂ ಬದ್ದರಾಗಿರುತ್ತೇವೆ ಎಂದಿದ್ದಾರೆ.
ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಎಲ್ಲ ನಾಯಕರೂ ಒಟ್ಟಾಗಿ ಶ್ರಮಿಸಲಿದ್ದೇವೆ. ಕಾರ್ಯಕರ್ತರು ಇದಕ್ಕೆ ಪೂರಕವಾಗಿ ಶ್ರಮ ವಹಿಸಬೇಕು ಎಂದರು.
ಅಭಿಮಾನಿಗಳ ಆಕ್ರೋಶ: ಕೆ.ಎಸ್. ಈಶ್ವರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿರುವ ಹಿನ್ನೆಲೆ ನಗರದಲ್ಲಿ ಅಭಿಮಾನಿಗಳು ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ನಿನ್ನೆಯವರೆಗೂ ಈಶ್ವರಪ್ಪನವರಿಗೆ ಟಿಕೆಟ್ ನಿಶ್ಚಿತ ಎಂದೇ ಹೇಳಲಾಗಿತ್ತು. ಆದರೆ, ಇಂದು ಏಕಾಏಕಿ ಸ್ವತಃ ಅವರೇ ರಾಜಕೀಯ ನಿವೃತ್ತಿ ಘೋಷಿಸಿರುವುದು ಜಿಲ್ಲೆಯ ಹಿರಿಯ ನಾಯಕರು ಹಾಗು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದ್ದು, ನಿವೃತ್ತಿ ಘೋಷಣೆ ಸುದ್ಧಿ ಹೊರಬಿದ್ದ ನಂತರ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಈಶ್ವರಪ್ಪ ನವರ ನಿವಾಸಕ್ಕೆ ದೌಡಾಯಿಸಿದ್ದು, ತಮ್ಮ ಈ ನಿರ್ಧಾರವನ್ನು ಬದಲಾಯಿಸಿಕೊಳ್ಳಬೇಕೆಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಬಿಜೆಪಿ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತರು ಟೈರಿಗೆ ಬೆಂಕಿ ಹಚ್ಚಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.