ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ಗ್ರಾ.ಪಂ. ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಸದಸ್ಯರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಇಂದು ಜಿ.ಪಂ.ಕಚೇರಿ ಎದುರು ಧರಣಿ ನಡೆಸಿದರು.


ಕುರುವಳ್ಳಿ ಗ್ರಾ.ಪಂ. ಪಿಡಿಒ ಸರಿತಾ ಅವರು ಜ.೩೦ರಂದು ಮೇಲಿನ ಕುರುವಳ್ಳಿ ಗ್ರಾಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳಿಗೆ ನಿಂದನೆ ಮಾಡಿದ್ದೂ ಅಲ್ಲದೆ, ಬಿಜೆಪಿ ಮುಖಂಡರ ಬೆಂಬಲ ಹಾಗೂ ಮಾರ್ಗದರ್ಶನದ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಪ್ರತಿರೋಧ ಮಾಡದೆ ಇರುವ ಕಾರಣ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯಿದೆ ಬಳಸಿ ಅಧ್ಯಕ್ಷರು ಮತ್ತು ಸದಸ್ಯರನ್ನು ಜೈಲಿಗೆ ಕಳುಹಿಸುವ ಉದ್ದೇಶ ಇದ್ದುದರಿಂದ ಗ್ರಾಪಂ ಸಭೆಯಲ್ಲಿ ಅವರು ಪ್ರತಿರೋಧ ತೋರಿರುವುದಿಲ್ಲ ಎಂದು ಧರಣಿನಿರತರು ಆರೋಪಿಸಿದರು.


ತೀರ್ಥಹಳ್ಳಿ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳು, ಪೊಲೀಸರು ಪಿಡಿಒ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು ಮತ್ತು ಅವರಿಗೆ ಸಹಕರಿಸಿದ ಬಿಜೆಪಿ ಬೆಂಬಲಿತ ಸದಸ್ಯರ ಸದಸ್ಯತ್ವವನ್ನು ರದ್ದುಮಾಡಬೇಕು. ಅವರ ವಿರುದ್ಧ ಪ್ರತಿಭಟನೆ, ಮನವಿ ಮಾಡಿದ್ದರೂ ಕೂಡ ಗೃಹ ಸಚಿವರ ಬೆಂಬಲದಿಂದ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಅವರನ್ನು ಅಮಾನತು ಮಾಡಿ ತನಿಖೆಗೆ ಒಳಪಡಿಸಬೇಕು. ತಕ್ಷಣವೇ ಅವರನ್ನು ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.


ತೀರ್ಥಹಳ್ಳಿಯಲ್ಲಿ ಬಿಜೆಪಿ ಬೆಂಬಲಿತ ಗೂಂಡಾಗಳ ವರ್ತನೆ ಮಿತಿಮೀರುತ್ತಿದೆ. ಅವರು ಏನು ಮಾಡಿದರೂ ಅವರ ಮೇಲೆ ಕೇಸ್ ಆಗುವುದಿಲ್ಲ. ಇದಕ್ಕೆ ಉದಾಹರಣೆ ಎಂದರೆ ನೊಣಬೂರು ಶೂಟೌಟ್, ನೆಗಲೋಣೀ ಶೂಟೌಟ್, ಮೂಡ್ಲಿ ಹಲ್ಲೆ ಪ್ರಕರಣ, ಅಗಸವಾಡಿ ಕೊಲೆ ಪ್ರಕರಣ, ದೌರ್ಜನ್ಯ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಿಜೆಪಿಯ ಮುಖಂಡರನ್ನು ಕೈಬಿಟ್ಟಿರುವುದೇ ಆಗಿದೆ ಎಂದು ದೂರಿದರು.


ಮೇಲಿನ ಕುರುವಳ್ಳಿಯಲ್ಲಿ ನಡೆದಂತೆ ಈ ಹಿಂದೆ ಕೋಣಂದೂರು ಗ್ರಾಪಂನಲ್ಲೂ ನಡೆದಿತ್ತು. ಬಿಜೆಪಿ ಬೆಂಬಲಿತ ಸದಸ್ಯನೊಬ್ಬ ಮಹಿಳಾ ಸದಸ್ಯೆ ವಿಶಾಲಾಕ್ಷಿ ಪ್ರಫುಲ್ಲಚಂದ್ರ ಅವರ ಮೇಲೆ ಹಲ್ಲೆ ನಡೆಸಿದ್ದರು. ಕೋಣಂದೂರು ಗ್ರಾಪಂನಲ್ಲೂ ಕೂಡ ಸುರೇಶ್ ಅವರ ಮೇಲೆ ಹಲ್ಲೆ ನಡೆದಿತ್ತು. ಈ ಬಗ್ಗೆ ಸಿಸಿ ಕ್ಯಾಮೆರಾದಲ್ಲಿ ದಾಖಲೆ ಇದೆ. ದೂರುಗಳನ್ನೂ ನೀಡಿದ್ದೇವೆ . ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಎಲ್ಲಾ ಘಟನೆಗಳ ಹಿಂದೆ ಗೃಹ ಸಚಿವರ ಬೆಂಬಲವಿದೆ ಎಂದು ಆರೋಪಿಸಿದರು.


ಪ್ರತಿಭಟನೆಯಲ್ಲಿ ಮೇಲಿನಕುರುವಳ್ಳಿ ಗ್ರಾ.ಪಂ ಅಧ್ಯಕ್ಷೆ ಭವ್ಯಾ ರಾಘವೇಂದ್ರ,, ಬಂಡೆವೆಂಕಟೇಶ್, ನಿಶ್ಚಲ್ ಜಾದೂಗಾರ್, ಪ್ರಭಾಕರ್, ಮಂಗಳಾ ಗೋಪಿ, ಕಂಪನ ಸುರೇಶ್, ವಿಶಾಲಾಕ್ಷಿ ಪ್ರಫುಲ್ಲಚಂದ್ರ, ಕಾಂಗ್ರೆಸ್ ಮುಖಂಡರಾದ ರಮೇಶ್ ಹೆಗ್ಡೆ, ಎಸ್.ಪಿ.ದಿನೇಶ್, ದೇವಿಕುಮಾರ್, ಸಿ.ಎಸ್. ಚಂದ್ರಭೂಪಾಲ, ಟಿ.ಕೃಷ್ಣಪ್ಪ, ಚೇತನ್, ಮಧುಸೂದನ್ ಇನ್ನಿತರರು ಭಾಗವಹಿಸಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!