ಗ್ರಾಮಾಂತರ ಬಿಜೆಪಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ದೇವಸ್ಥಾನ ಹಾಗೂ ಕೆರೆ ಒತ್ತುವರಿ ಮಾಡಿಕೊಂಡಿರುವುದನ್ನು ಖಂಡಿಸಿ, ಕತ್ತಲಘಟ್ಟ ಚೌಡೇಶ್ವರಿ ಹಾಗೂ ಭೂತೇಶ್ವರ ಸ್ವಾಮಿ ಹಿಂದೂ ಧಾರ್ಮಿಕ ರಕ್ಷಣಾ ವೇದಿಕೆ ಮಾ.೧೩ರಂದು ಪ್ರತಿಭಟನೆ ಹಮ್ಮಿಕೊಂಡಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ವೇದಿಕೆಯ ಮುಖಂಡ ಎಂ.ಕೆ. ಬಲ ದೇವ ಕೃಷ್ಣ, ಶಾಸಕ ಕೆ.ಬಿ. ಅಶೋಕ್ನಾಯ್ಕ ಮತ್ತು ಸಹಚರರು ಹಿಂದೂ ಹಾಗೂ ಧಾರ್ಮಿಕ ವಿರೋಧಿಯಾಗಿದ್ದಾರೆ. ತಮ್ಮ ಶಿಕ್ಷಣ ಸಂಸ್ಥೆಗಾಗಿ ದೇವಸ್ಥಾನ ಹಾಗೂ ಕೆರೆಯ ಸುಮಾರು ೧.೨೦ ಎಕರೆ ಜಾಗವನ್ನು ಕಬಳಿಸಿದ್ದಾರೆ ಎಂದು ಆರೋಪಿಸಿದರು.
ಹಿಂದೂ ಹಾಗೂ ಧಾರ್ಮಿಕ ವಿರೋಧಿ ಶಾಸಕ ಕೆ.ಬಿ. ಅಶೋಕ ನಾಯ್ಕ ದೇವಸ್ಥಾನ ಹಾಗೂ ಕೆರೆಯ ಪಕ್ಕದ ಜಾಗದಲ್ಲಿ ಅಕ್ಷರ ವಿದ್ಯಾಸಂಸ್ಥೆ ನಿರ್ಮಿಸಿ ಬೃಹತ್ ಶಾಲಾ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಶಿಕ್ಷಣ ಸಂಸ್ಥೆಯ ಕಟ್ಟಡವನ್ನು ಸರ್ಕಾರಿ ಸರ್ವೆ ನಂ.೯/೧ರಲ್ಲಿ ೨ ಎಕರೆ ೨೬ ಗುಂಟೆ ಕೆರೆ ಜಾಗದಲ್ಲಿ ಒಂದು ಎಕರೆ ೨೦ ಗುಂಟೆ ಜಾಗವನ್ನು ಕಬಳಿಸಿ ಕೊಂಡು ಅತಿಕ್ರಮಣದಿಂದ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಸರ್ಕಾರದ ನಿಯಮದಂತೆ ಕಾಲೇಜು ಕಟ್ಟಡವನ್ನು ನಿರ್ಮಾಣ ಮಾಡುವಾಗ ಬಫರ್ ಝೋನ್ ೩೦ ಮೀಟರ್ ಹೊರತುಪಡಿಸಿ ನಿರ್ಮಿಸಬೇ ಕಾಗಿತ್ತು. ಅದನ್ನು ಕಾನೂನುಬಾಹಿರವಾಗಿ ನಿರ್ಮಿಸಿದ್ದಾರೆ ಎಂದು ದೂರಿದರು
ಚನ್ನಮುಂಬಾಪುರ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಜನಾಂಗದವರು ಇಲ್ಲದಿದ್ದರೂ ಸಹ ಇವರ ಅನುದಾನದಲ್ಲಿ ಕೆರೆಯ ಅಭಿವೃದ್ಧಿ ಹೆಸರಿನಲ್ಲಿ ೮೦ ಲಕ್ಷ ರೂ. ಅನುದಾನ ಮಂಜೂರು ಮಾಡಿಸಿಕೊಂಡು ಕೆರೆ ಅಭಿವೃದ್ಧಿ ಪಡಿಸದೆ ಸದರಿ ಅನುದಾನ ವನ್ನು ಶಾಲಾ ಕಟ್ಟಡಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಚೌಡೇಶ್ವರಿ ಮತ್ತು ಭೂತೇಶ್ವರ ದೇವ ಸ್ಥಾನವನ್ನು ನಾಶ ಮಾಡಿ ಕೆರೆಯನ್ನು ಸಂಪೂರ್ಣ ಕಬಳಿಸುವ ಹುನ್ನಾರ ನಡೆಸಿದ್ದು, ಇದನ್ನು ಪ್ರಶ್ನಿಸಿದ ಗ್ರಾಮಸ್ಥರು, ಭಕ್ತಾದಿಗಳಿಗೆ ಹಾಗೂ ಅರ್ಚಕರಿಗೆ ಶಾಸಕ ಅಶೋಕ್ ನಾಯ್ಕ ಹಾಗೂ ಅವರ ಚೇಲಾಗಳು ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗೂಂಡಾಗ ಳಂತೆ ವರ್ತಿಸಿ ಅರ್ಚಕರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.
ವಕೀಲ ಗೇಮು ನಾಯ್ಕ ಮಾತನಾಡಿ, ಬಿಜೆಪಿ ಪಕ್ಷವು ಹಿಂದೂ ಧರ್ಮ ಹಾಗೂ ಧಾರ್ಮಿಕತೆಯನ್ನು ರಕ್ಷಣೆ ಮಾಡುತ್ತೇವೆಂದು ಬೊಗಳೆ ಬಿಡುತ್ತಿದೆ. ಅವರದೇ ಪಕ್ಷದ ಶಾಸಕ ಹಿಂದೂ ಧರ್ಮಕ್ಕೆ ಧಕ್ಕೆ ಉಂಟುಮಾಡುತ್ತಿ ದ್ದರೂ ಪಕ್ಷದವರು ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ದೇವಸ್ಥಾನ ಧ್ವಂಸಗೊಳಿಸಿದ ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದು, ಕೆರೆಯ ಜಾಗ ಒತ್ತುವರಿಯಾಗಿದೆ ಎಂದು ಭಾವನೆ ವ್ಯಕ್ತಪಡಿಸಿದ್ದಾರೆ. ಈವರೆಗೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದ ಅವರು, ಧ್ವಂಸ ಮಾಡಿರುವ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.
ಮಾ೧೩ರಂದು ಬೆಳಿಗ್ಗೆ ೧೦ ಗಂಟೆಗೆ ಚನ್ನಮುಂಬಾಪುರ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಅಣಕು ಶವಯಾತ್ರೆ ಮತ್ತು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಪಕ್ಷದ ಮುಖಂಡರಾದ ಅನಿತಾಕುಮಾರಿ, ಜಗದೀಶ್, ಶಶಿಕುಮಾರ್, ರಾಘವೇಂದ್ರ ನಾಯ್ಕ, ಬೂದಿಗೆರೆ ಬಸವರಾಜ್, ಚಂದ್ರಮ್ಮ, ಶಾಂತಮ್ಮ, ಗ್ರಾ.ಪಂ. ಸದಸ್ಯ ಮಂಜು, ಗಿರೀಶ್, ಅರ್ಚಕ ಶೇಖರಪ್ಪ ಇನ್ನಿತರರು ಉಪಸ್ಥಿತರಿದ್ದರು.