ಹೋಳಿ ಹುಣ್ಣಿಮೆ ಅಂಗವಾಗಿ ನಗರದ ವಿವಿಧೆಡೆ ಹೋಳಿ ಹಬ್ಬಕ್ಕೆ ಭರ್ಜರಿ ತಯಾರಿ ನಡೆಸಿದ್ದು, ಗಾಂಧಿ ಬಜಾರಿನ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಾಮಣ್ಣನ ಪ್ರತಿಷ್ಟಾಪನೆ ಮಾಡಲಾಗಿದೆ.
ಬಿಬಿ ರಸ್ತೆಯ ಕೂಡಲಿ ಮಠದಲ್ಲಿ ಯಕ್ಷ ಅಲಂಕಾರದಲ್ಲಿ ಆನೆಯ ಮೇಲೆ ಕಾಮಣ್ಣನ ಸವಾರಿಯ ಬಿಂಬವನ್ನು ಪ್ರತಿಷ್ಟಾಪಿಸಲಾಗಿದ್ದು, ತುಳುಜಾ ಭವಾನಿ ದೇವಸ್ಥಾನದ ಆವರಣದಲ್ಲಿ ಹಾಗೂ ಕುಂಬಾರ ಗುಂಡಿಯಲ್ಲಿ ಕಾಮಣ್ಣ ಪ್ರತಿಷ್ಟಾಪನೆ ಮಾಡಲಾಗಿದ್ದು, ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ಸೀಗೆಹಟ್ಟಿಯಲ್ಲಿ ಕುಂಬಾರ ಸಮಾಜದಿಂದ ೩ ದಿನಗಳ ಕಾಲ ರತಿ-ಮನ್ಮಥ ಪ್ರತಿಷ್ಟಾಪನೆ ಮಾಡಿ ಶ್ರದ್ಧಾ ಭಕ್ತಿಯಿಂದ ಹೋಳಿ ಹಬ್ಬವನ್ನು ಆಚರಿಸುತ್ತಾರೆ.
ಇಲ್ಲಿನ ವಿಶೇಷವೆಂದರೆ ಯಾರಿಗೆ ಮದುವೆಯಾಗಿಲ್ಲವೊ ಮತ್ತು ಸಂತಾನ ಭಾಗ್ಯ ಇಲ್ಲದವರು ರತಿ-ಮನ್ಮಥರ ದರ್ಶನ ಮಾಡಿ ಭಕ್ತಿಯಿಂದ ಬೇಡಿಕೊಂಡಲ್ಲಿ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ಪ್ರತೀತಿ ಇದ್ದು, ಹಲವಾರು ವರ್ಷಗಳಿಂದ ಇಲ್ಲಿ ರತಿ-ಮನ್ಮಥರ ಸ್ಥಾಪನೆಮಾಡಿ ಇಡೀ ಶಿವಮೊಗ್ಗದ ಜನತೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ನಾಳೆ ಹುಣ್ಣಿಮೆಯಂದು ವಿಶೇಷ ಪೂಜೆ ನಡೆಯಲಿದ್ದು, ನಾಡಿದ್ದು ಕಾಮಣ್ಣನ ದಹನ ಮಾಡಲಿದ್ದಾರೆ ಎಂದು ಕುಂಬಾರ ಸಮಾಜದ ಮುಖ್ಯಸ್ಥರು ತಿಳಿಸಿದ್ದಾರೆ.