ಶಿವಮೊಗ್ಗ: ಶಿವಮೊಗ್ಗದಲ್ಲಿ ನೂತನ ವಿಮಾನ ನಿಲ್ದಾಣ ಉದ್ಘಾಟನೆ ಆಗುವುದರೊಂದಿಗೆ ಎಲ್ಲ ಬಡವರೂ ವಿಮಾನದಲ್ಲಿ ಪ್ರಯಾಣಿಸುವಂತಾಗಬೇಕು, ಮಲೆನಾಡು ಉದ್ಯೋಗ ನೀಡುವ ಹೆಬ್ಬಾಗಿಲಾಗಬೇಕು ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.
ನಗರದ ಸೋಗಾನೆ ಬಳಿ ನಿರ್ಮಿಸಿರುವ ನೂತನ ವಿಮಾನನಿಲ್ದಾಣವನ್ನು ವಿಮಾನದಲ್ಲಿಯೇ ಬಂದಿಳಿಯುವ ಮೂಲಕ ಉದ್ಘಾಟಿಸಿದ ಅವರು ನಂತರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಅವರು,
ಶಿವಮೊಗ್ಗವನ್ನು ಹಾಡಿ ಹೊಗಳಿದರು.
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸುವ ಭಾಗ್ಯ ನನ್ನದಾಗಿದೆ ಮಲೆನಾಡು ಜನರ ಕನಸು ನನಸಾಗುತ್ತಿದೆ. ಡಬಲ್ ಇಂಜಿನ್ ಸರ್ಕಾರ ಶಿವಮೊಗ್ಗದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿದೆ. ಶಿವಮೊಗ್ಗದಲ್ಲಿ ಅಭಿವೃದ್ಧಿಯ ಬಾಗಿಲು ತೆರೆದಿದೆ. ರೈಲ್ವೇ, ಹೈವೇ, ಏರ್ ವೇ ಕ್ಷೇತ್ರದಲ್ಲಿ ಅಭಿವೃದ್ಧಿಯ ದಾಪುಗಾಲು ಹಾಕಿದೆ. ಕಾಂಗ್ರೆಸ್ ಸರ್ಕಾರ ಹಳ್ಳಿಗಳನ್ನು ನಿರ್ಲಕ್ಷಿಸಿತ್ತು. ಆದರೆ, ನಮ್ಮ ಸರ್ಕಾರ ಪ್ರತಿ ಹಳ್ಳಿಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದರು.
ಜಗತ್ತು ಇಂದು ಭಾರತದತ್ತ ನೋಡುತ್ತಿದೆ. ಸರ್ಕಾರದ ಮಂತ್ರ ಒಂದೇ ಆಗಿದೆ. ಅದು ಅಭಿವೃದ್ಧಿಯಾಗಿದೆ. ಶಿವಮೊಗ್ಗದ ವಿಕಾಸ ವಿಮಾನ ನಿಲ್ದಾಣದಿಂದ ಮತ್ತಷ್ಟು ಹೆಚ್ಚಾಗುತ್ತದೆ. ಕರ್ನಾಟಕದ ಅಭಿವೃದ್ಧಿಯ ರಥ ಪ್ರಗತಿಯ ಪಥದ ಮೇಲೆ ಸಾಗಿದೆ. ಹಳ್ಳಿ ಹಳ್ಳಿಗಳಲ್ಲೂ ಟಯರ್ ೨, ಟಯರ್ ೩ ಸಿಟಿಗಳಲ್ಲಿಯೂ ಅಭಿವೃದ್ಧಿಯ ಬಾಗಿಲು ತೆರೆದಿದೆ ಎಂದರು.
ನೇಚರ್, ಕಲ್ಚರ್, ಅಗ್ರಿಕಲ್ಚರ್ ನಲ್ಲಿ ಶಿವಮೊಗ್ಗದ ವಿಕಾಸ ಶುರುವಾಗಿದೆ. ಶಿವಮೊಗ್ಗ ನೈಸರ್ಗಿಕ ತಾಣ, ವನ್ಯ ಜೀವಿಗಳ ತಾಣವೂ ಆಗಿದೆ. ವಿಶ್ವ ವಿಖ್ಯಾತ ಜೋಗ ಜಲಪಾತದಂತಹ ಅದ್ಭುತಗಳು ಇಲ್ಲಿವೆ. ಆನೆ ಬಿಡಾರ, ಸಿಂಹಧಾಮ, ರಾಷ್ಟ್ರಕವಿ ಕುವೆಂಪು ಜನ್ಮಸ್ಥಳ, ಸಂಸ್ಕೃತ ಗ್ರಾಮ ಮತ್ತೂರು ಸಿಗಂದೂರು ಚೌಡೇಶ್ವರಿ, ಕೋಟೆ ಶ್ರೀ ಆಂಜನೇಯ ದೇವಾಲಯ ಶ್ರೀಧರಾಶ್ರಮ ಇಲ್ಲಿವೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರವೂ ಆದ ಮಲೆನಾಡು ಶಿವಮೊಗ್ಗ ಸ್ವಾತಂತ್ರ್ಯ ಹೋರಾಟಕ್ಕೂ ಹೆಸರಾಗಿದೆ. ಎಸೂರು ಕೊಟ್ಟರೂ ಈಸೂರ ಬಿಡೆವು ಎಂದು ಬ್ರಿಟಿಷರ ವಿರುದ್ಧ ಈಸೂರಿನ ಜನರು ಹೋರಾಟ ನಡೆಸಿದ್ದರು ಎಂದು ಸ್ಮರಿಸಿದರು.
ಗಂಗಾಸ್ನಾನ ತುಂಗಾಪಾನ ಎಂಬ ನಾಣ್ಣುಡಿಯಂತೆ ಗಂಗೆಯಲ್ಲಿ ಸ್ನಾನ ಮಾಡಿದಷ್ಟೇ ತುಂಗಾ ನದಿ ನೀರು ಕುಡಿಯುವುದು ಕೂಡ ಮಹತ್ವದ್ದಾಗಿದೆ ಎಂದು ತುಂಗಾ ನದಿಯ ನೀರಿನ ಮಹತ್ವವನ್ನು ಹೇಳಿದರು.
೨೦೧೪ರವರೆಗೂ ದೇಶದಲ್ಲಿ ೭೪ ವಿಮಾನ ನಿಲ್ದಾಣಗಳಿದ್ದವು. ಕಳೆದ ೯ ವರ್ಷಗಳಲ್ಲಿ ೭೪ ಹೊಸ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಹವಾಯಿ ಚಪ್ಪಲಿ ಹಾಕುವವರೂ ವಿಮಾನದಲ್ಲಿ ಹಾರಾಟ ನಡೆಸಬಹುದಾಗಿದೆ. ಕಾಂಗ್ರೆಸ್ ಸಣ್ಣ ನಗರಗಳ ಅಭಿವೃದ್ಧಿ ಕಡೆಗಣಿಸಿತ್ತು. ಅಭಿವೃದ್ಧಿ ಕಾರ್ಯ ಕೈಗೊಳ್ಳಲೆಂದೇ ನಮ್ಮ ಸರ್ಕಾರ ಬಂದಿದೆ. ಮಲೆನಾಡಿನ ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಬದ್ಧವಾಗಿದೆ ಎಂದರು.
ಶಿವಮೊಗ್ಗ ಎಜುಕೇಷನಲ್ ಹಬ್ ಆಗಿದೆ. ವಿಮಾನ ನಿಲ್ದಾಣ ಆರಂಭವಾಗಿದ್ದು, ಶಿಕ್ಷಣ ಉದ್ಯೋಗ ದ ಬಾಗಿಲು ತೆರೆದಿದೆ. ಮೂರು ಲಕ್ಷಕ್ಕೂ ಅಧಿಕ ಮನೆಗಳಿಗೆ ಜಲಜೀವನ್ ಮಿಷನ್ ಮೂಲಕ ನಲ್ಲಿ ಸಂಪರ್ಕ ನೀಡಲಾಗಿದೆ. ಬಿಜೆಪಿ ಸರ್ಕಾರ ಬಡವರು, ಗ್ರಾಮಗಳು, ಮಹಿಳೆಯರ ಅಭಿವೃದ್ಧಿಗೆ ಒತ್ತು ನೀಡಿದೆ ಕೋಟೇಗಂಗೂರಿನಲ್ಲಿ ಹೊಸ ರೈಲ್ವೆ ಟರ್ಮಿನಲ್ ನಿರ್ಮಾಣ ಮಾಡಲಿದ್ದು. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ಮಾರ್ಗ ನಿರ್ಮಿಸಲಾಗುತ್ತದೆ. ಹೀಗೆ ವಿಮಾನ, ರೈಲು, ರಸ್ತೆ, ಅಭಿವೃದ್ಧಿಯಿಂದ ಶಿವಮೊಗ್ಗದ ಚಿತ್ರಣ ಬದಲಾಗಲಿದೆ. ಅಡಿಕೆ. ಮಸಾಲಾ ಪದಾರ್ಥಗಳು ಸೇರಿದಂತೆ ಇಲ್ಲಿನ ಕೃಷಿ ಉತ್ಪನ್ನಗಳಿಗೆ ದೇಶದ ವಿವಿಧ ಭಾಗಗಳಿಗೂ ಮಾರುಕಟ್ಟೆ ಕಲ್ಪಿಸಬಹುದು ಎಂದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಸಚಿವರಾದ ಆರಗ ಜ್ಞಾನೇಂದ್ರ, ಭೈರತಿ ಬಸವರಾಜು, ನಾರಾಯಣ ಗೌಡ, ವಿ. ಸೋಮಣ್ಣ, ಸಿ.ಸಿ. ಪಾಟೀಲ್, ಶಾಸಕರಾದ ಕೆ.ಎಸ್. ಈಶ್ವರಪ್ಪ, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ಅಶೋಕ ನಾಯ್ಕ ಮೊದಲಾದವರಿದ್ದರು.