ಶಿವಮೊಗ್ಗ ; ಕೇಂದ್ರ ಮತ್ತು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಜಾರಿಗೆ ತರಲು ಹೊರಟಿರುವ ರೈತ ವಿರೋಧಿ ಕಾಯ್ದೆಗಳನ್ನು ಖಂಡಿಸಿ ರೈತ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಇಂದು ಕರೆ ನೀಡಿದ್ದ ಬಂದ್ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ಬೆಂಬಲ ವ್ಯಕ್ತವಾಗಿದೆ.
ಬಂದ್ ಹಿನ್ನಲೆಯಲ್ಲಿ ಗಾಂಧಿಬಜಾರ್, ನೆಹರು ರಸ್ತೆ, ಬಿ.ಹೆಚ್.ರಸ್ತೆ, ಗೋಪಿ ಸರ್ಕಲ್, ಎನ್.ಟಿ.ರಸ್ತೆ, ದುರ್ಗಿಗುಡಿ ಮುಂತಾದ ಪ್ರಮುಖ ರಸ್ತೆಗಳ ಅಂಗಡಿ ಮುಂಗಟ್ಟುಗಳು ಬಂದ್ ಆಗಿ ದ್ದವು. ವರ್ತಕರು ಸ್ವಯಂ ಪ್ರೇರಿತರಾಗಿ ಬಂದ್ಗೆ ಬೆಂಬಲ ನೀಡಿದ್ದು ಕಂಡುಬಂದಿತು. ಕೆಎಸ್ ಆರ್ಟಿಸಿ ಬಸ್ಗಳ ಸಂಚಾರ ವಿರಳ ವಾಗಿತ್ತು. ಖಾಸಗಿ ಬಸ್ಗಳ ಸಂಚಾರ ಇರಲಿಲ್ಲ. ರಸ್ತೆಯಲ್ಲಿ ಆಟೋಗಳ ಸಂಚಾರ ತುಂಬಾ ವಿರಳವಾಗಿತ್ತು. ಸರ್ಕಾರಿ ಕಚೇರಿಗಳು ತೆರೆದಿದ್ದರೂ ಕೂಡ ಸಾರ್ವಜನಿಕರ ದರ್ಶನ ಕಡಿಮೆ ಇತ್ತು.
ತರಕಾರಿ ಮಾರುಕಟ್ಟೆ ಸಂಪೂರ್ಣ ಬಂದ್
ಪ್ರತಿದಿನವೂ ಜನಜಂಗುಳಿಯಿಂದ ಕೂಡುತ್ತಿದ್ದ್ದ ತರಕಾರಿ ಮಾರುಕಟ್ಟೆ ಇಂದು ಸಂಪೂರ್ಣ ಬಂದ್ ಆಗಿತ್ತು. ತರಕಾರಿ ಮಾರುಕಟ್ಟೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ನೀಡಿದ್ದ ಬಂದ್ ಕರೆಗೆ ಸಹಕರಿಸಿದ ವ್ಯಾಪಾರಸ್ಥರು ತಮ್ಮ ವಹಿವಾಟುಗಳನ್ನು ಬಂದ್ ಮಾಡಿದ್ದರು. ಸುತ್ತಮುತ್ತಲ ಅಂಗಡಿಮುಂಗಟ್ಟುಗಳು, ಹೋಟೇಲ್ಗಳು ಕೂಡ ಬಾಗಿಲು ಮುಚ್ಚಿದ್ದವು. ಆದರೆ ಹೊರಗಡೆ ಮಾತ್ರ ಕೆಲವು ಸಣ್ಣಪುಟ್ಟ ತರಕಾರಿ ಮಾರಾಟ ಮಾಡುವವರು ಎಂದಿನಂತೆ ವ್ಯಾಪಾರ ಮಾಡುತ್ತಿದ್ದರು.
ಸಂಘಟನೆಗಳ ಪ್ರತಿಭಟನೆ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿಕಾಯ್ದೆ ವಿರೋಧಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ),ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸ್ವಾಭಿಮಾನಿ ಬಣ: ಭೂಸುಧಾರಣೆ, ಎಪಿಎಂಸಿ ಸೇರಿದಂತೆ ಕೇಂದ್ರ ಸರ್ಕಾರ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿವೆ. ಎಪಿಎಂಸಿ ಕಾಯ್ದೆಯು ರೈತರಿಗೆ ಮಾರಕವಾಗಿದೆ. ಬೆಂಬಲ ಬೆಲೆಯ ರಕ್ಷಣೆ ತಪ್ಪಿಸಿ ರೈತರನ್ನು ಅನಾಥರನ್ನಾಗಿ ಮಾಡುತ್ತವೆ. ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಮಧುಸೂದನ್, ರವಿಪ್ರಸಾದ್, ನಯಾಬ್, ನೂರುಲ್ಲಾ, ಭರತ್, ರಘು, ಇಂದ್ರೇಶ್, ಅಮೃತ್, ಶಿವಕುಮಾರ್ ಮತ್ತಿತರರಿದ್ದರು.
ನಾರಾಯಣಗೌಡ ಬಣ: ಭೂಸುಧಾರಣಾ ಕಾಯ್ದೆ ವಿರೋಧಿಸಿ ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳ ಆವರಣದಲ್ಲಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ವೇದಿಕೆಯ ಪ್ರಮುಖರಾದ ಮಂಜುನಾಥ್ ಎಸ್.ಕೊಟ್ಯಾನ್, ನಿಂಬೆಹಣ್ಣು ಮಂಜುನಾಥ್, ಗಂಗಾಧರ್ ಮತ್ತಿತರರಿದ್ದರು.