ಕೆ.ಟಿ.ಗಂಗಾಧರ್ – ಹೆಚ್ ಆರ್ ಬಸವರಾಜಪ್ಪರನ್ನು ಒಂದುಗೂಡಿಸಿದ ಬಂದ್!?

ಶಿವಮೊಗ್ಗ,ಸೆ.26:

ಭೂ ಸುಧಾರಣೆ, ಕಾರ್ಮಿಕ, ವಿದ್ಯುತ್ ಮುಂತಾದ ಜನವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಸೆ.28 ರಂದು ನಡೆಯಲಿರುವ ಕರ್ನಾಟಕ ಬಂದ್‍ಗೆ ಇಲ್ಲಿನ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಒಕ್ಕೂಟ ತನ್ನ ಬೆಂಬಲ ವ್ಯಕ್ತಪಡಿಸಿ ಜಿಲ್ಲೆಯ ಬಂದ್‍ಗೆ ಕರೆ ನೀಡಿದೆ.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ.ಗಂಗಾಧರ್, ವಕೀಲ ಕೆ.ಪಿ.ಶ್ರೀಪಾಲ್, ಹೋರಾಟಗಾರ ಕೆ.ಎಲ್.ಅಶೋಕ್, ಡಿಎಸ್‍ಎಸ್‍ನ ಹಾಲೇಶಪ್ಪ, ಎಸ್‍ಡಿಪಿಐನ ಸಲೀಂ ಮುಂತಾದ ವಿವಿಧ ಸಂಘಟನೆಗಳ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೆ.28ಕ್ಕೆ ನಡೆಯಲಿರುವ ಕರ್ನಾಟಕ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದರಲ್ಲದೇ ಶಿವಮೊಗ್ಗದಲ್ಲಿಯೂ ಬಂದ್ ಯಶಸ್ವಿಯಾಗುವಂತೆ ಕರೆ ನೀಡಿದರು.
ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ತರುತ್ತಿರುವ ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ನಿನ್ನೆ ಕರೆ ನೀಡಿದ್ದ ಭಾರತ್ ಬಂದ್ ಯಶಸ್ವಿಯಾಗಿದ್ದು, ರೈತ ಚಳವಳಿ ಭುಗಿಲೆದ್ದಿದೆ ಎಂದು ಹೆಚ್.ಆರ್. ಬಸವರಾಜಪ್ಪ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರೇ ಸ್ವತಃ ಮಸೂದೆಗಳ ಸಮರ್ಥನೆಗೆ ಇಳಿದಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಮಸೂದೆಗಳನ್ನು ಸಮರ್ಥನೆ ಮಾಡಲು ಕರೆ ಕೊಟ್ಟಿದ್ದಾರೆ. ಆದರೆ ಅವರ ಸರ್ಕಾರದ ಮಂತ್ರಿಯೇ ಮಸೂದೆಗಳನ್ನು ವಿರೋಧಿಸಿ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಈ ಕಾಯ್ದೆಗಳು ರೈತಪರ ಎನ್ನುವುದಾದರೆ ರೈತರು, ಕಾರ್ಮಿಕರು, ದಲಿತರ ಜೊತೆ ಮಾತುಕತೆ ನಡೆಸುವುದನ್ನು ಬಿಟ್ಟು ಏಕಾಏಕಿ ಕಾಯ್ದೆಗಳನ್ನು ಹೊರತಂದಿರುವುದನ್ನು ಖಂಡಿಸುತ್ತೇವೆ ಎಂದರು.
ಕರ್ನಾಟಕದಲ್ಲಿ ರೈತ, ದಲಿತ, ಕಾರ್ಮಿಕ ವಿರೋಧಿ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ವಿದ್ಯುಚ್ಚಕ್ತಿ ಕಾಯ್ದೆ ಜಾರಿಗೆ ತರಬಾರದು ಎಂದು ವಿಧಾನಸಭಾ ಅಧಿವೇಶನದ ಆರಂಭದ ದಿನದಂದು ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಬೃಹತ್ ಸಂಖ್ಯೆಯಲ್ಲಿ ವಿಧಾನಸೌಧ ಮುತ್ತಿಗೆ ಹಾಕಿ ಮೌರ್ಯವೃತ್ತದ ಗಾಂಧಿಪ್ರತಿಮೆ ಎದುರು ಮತ್ತು ಫ್ರೀಡಂ ಪಾರ್ಕ್‍ನಲ್ಲಿ ಆಹೋರಾತ್ರಿ ಧರಣಿ ನಡೆಸಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರೂ ಸಹ ರಾಜ್ಯ ಸರ್ಕಾರ ಎಪಿಎಂಸಿ ಮಸೂದೆ ಪಾಸ್ ಮಾಡಿದೆ ಎಂದು ಆರೋಪಿಸಿದರು.
ನಿನ್ನೆ ಭೂಸುಧಾರಣಾ ಮಸೂದೆಯನ್ನು ಸದನದಲ್ಲಿ ಮಂಡಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಸಹ ಈ ಮಸೂದೆಯನ್ನು ಹಿಂಪಡೆಯುವ ಲಕ್ಷಣ ಕಾಣಿಸುತ್ತಿಲ್ಲ. ಆದ್ದರಿಂದ ಸೆ.28 ರಂದು ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿದ್ದು, ಎಲ್ಲ ಶ್ರಮಿಕ ವರ್ಗದವರು, ರೈತರು, ಕಾರ್ಮಿಕರು, ವರ್ತಕರು, ಆಟೋಚಾಲಕರು, ಬೀದಿ ಬದಿ ವ್ಯಾಪಾರಿಗಳು, ಸಾರ್ವಜನಿಕರು ಈ ಬಂದ್‍ಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು.
ಅಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಕರ್ನಾಟಕ ಬಂದ್ ಪ್ರಯುಕ್ತ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಂದ್‍ಗೆ ಕರೆ ನೀಡಲಾಗಿದೆ. ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಬಸ್ ನಿಲ್ಧಾಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ.ಗಂಗಾಧರ್ ಮಾತನಾಡಿ, ಪ್ರಜಾಪ್ರಭುತ್ವದ ಉಳಿವಿಗಾಗಿ ಕರೆ ನೀಡಲಾಗಿರುವ ಕರ್ನಾಟಕ ಬಂದ್‍ಗೆ ಸಂಪೂರ್ಣ ಬೆಂಬಲವಿದೆ ಎಂದರು.
ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ಸಾರ್ವಜನಿಕರಲ್ಲಿ ಬಂದ್ ಯಶಸ್ವಿಗೊಳಿಸುವಂತೆ ಮನವಿ ಮಾಡಲು ಸೆ.26ರ ಇಂದು ಸಂಜೆ 4.30ಕ್ಕೆ ರಾಮಣ್ಣಶ್ರೇಷ್ಠಿ ಪಾರ್ಕ್‍ನಿಂದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಗರಾಧ್ಯಕ್ಷ ಸಿದ್ದಪ್ಪ, ಕರ್ನಾಟಕ ಜನಶಕ್ತಿ ಜಿಲ್ಲಾ ಸಂಚಾಲಕ ಡಿ.ಎಸ್.ಶಿವಕುಮಾರ್ ಉಪಸ್ಥಿತರಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!