: ಜಾತ್ರೆಯಲ್ಲಿ ಪೊಲೀಸರ ಹಿಟ್ಲರ್ ನಡೆ ಖಂಡನೀಯ. ಸಾಲಸೋಲ ಮಾಡಿಕೊಂಡು ಜಾತ್ರೆಯಲ್ಲಿ ಅಂಗಡಿ ಹಾಕಿದವರಿಗೆ ರಾತ್ರಿ ೧೧ಕ್ಕೆ ಬಂದ್ ಮಾಡುವಂತೆ ದಬ್ಬಾಳಿಕೆ ನಡೆಸುತ್ತಿರುವ ಇಲಾಖೆಯ ವರ್ತನೆ ವಿರುದ್ದ ಶಾಸಕರು, ನಗರಸಭೆ ಆಡಳಿತ ಧ್ವನಿ ಎತ್ತದೆ ಇರುವುದು ದುರದೃಷ್ಟಕರ ಸಂಗತಿ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಶುಕ್ರವಾರ ದೇವಿ ದರ್ಶನ ಮಾಡಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆದ ಕೆರೆಹಬ್ಬ ಸಂದರ್ಭದಲ್ಲಿ ಬೆಳಗ್ಗಿನವರೆಗೆ ವ್ಯಾಪಾರ ವಹಿವಾಟು ನಡೆಸಿ, ಮಾರಿಜಾತ್ರೆ ಸಂದರ್ಭದಲ್ಲಿ ರಾತ್ರಿ ೧೧ಕ್ಕೆ ಅಂಗಡಿ ಬಾಗಿಲು ಮುಚ್ಚಲು ಪೊಲೀಸರು ಒತ್ತಡ ಹೇರಲು ಕಾರಣ ಏನು ಎಂದು ಪ್ರಶ್ನಿಸಿದರು.
ಜಾತ್ರೆ ಮಾಡಲು ಬೇರೆಬೇರೆ ಊರುಗಳಿಂದ ಭಕ್ತರು ರಾತ್ರಿ ವೇಳೆ ಬರುತ್ತಾರೆ. ಅವರನ್ನು ನಿರಾಶೆಗೊಳಿಸುವ ಕೆಲಸವನ್ನು ಆಡಳಿತ ಮಾಡಬಾರದು. ಶಾಸಕರು, ನಗರಸಭೆ ಆಡಳಿತ ಮತ್ತು ಸಮಿತಿ ಪೊಲೀಸರಿಗೆ ಸಾಗರ ಜಾತ್ರೆ ಮಹತ್ವವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಬೇಕು. ಜಾತ್ರೆಯಲ್ಲಿ ಎಲ್ಲ ಆಟಿಕೆಗಳ ಪ್ರವೇಶ ಶುಲ್ಕ ೫೦ ರೂಪಾಯಿ ಎಂದು ಶಾಸಕರು ಭಾಷಣ ಮಾಡಿದ್ದರು. ಈಗ ೧೦೦ ರೂ. ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ದೂರುಗಳಿದ್ದು, ಇಲ್ಲಿಯೂ ಶೇ. ೪೦ ಕಮೀಷನ್ ವ್ಯವಹಾರ ನಡೆಯುತ್ತಿದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಏನೇ ಆದರೂ ಅಮ್ಮನ ದುಡ್ಡು ತಿಂದವರಿಗೆ ಉಳಿಗಾಲವಿಲ್ಲ. ಇದೆಲ್ಲದರ ನಡುವೆ ಸಾವಿರಾರು ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ನಾಡಿಗೆ ದೇವಿಯ ದರ್ಶನದಿಂದ ಸನ್ಮಂಗಲವನ್ನುಂಟು ಮಾಡಲಿ ಎಂದು ಹೇಳಿದರು.
ಮಾರಿಕಾಂಬಾ ಜಾತ್ರೆಗೆ ಅಂಕೆ ಹಾಕಿದ ಮೇಲೆ ಯಾವುದೇ ಶುಭಕಾರ್ಯ ಮಾಡಬಾರದು ಎನ್ನುವ ಪ್ರತೀತಿ ಇದ್ದರೂ ಶಾಸಕರು, ನಗರಸಭೆ ಆಡಳಿತ ಕೆರೆಹಬ್ಬ ಮಾಡುವ ಮೂಲಕ ಸಂಪ್ರದಾಯವನ್ನು ಮುರಿದಿದೆ. ಕೆರೆಹಬ್ಬದ ಹೆಸರಿನಲ್ಲಿ ಶಾಲಾಕಾಲೇಜು ವಿದ್ಯಾರ್ಥಿಗಳನ್ನು ಕರೆಸಿಕೊಂಡು ಶಾಸಕರು ಪೋಸ್ ಕೊಟ್ಟಿರುವುದು ನಾಚಿಕೆಗೇಡಿನ ಸಂಗತಿ. ಕೆರೆಹಬ್ಬದ ಬದಲು ನಗರವ್ಯಾಪ್ತಿಯಲ್ಲಿ ಹಾಳಾಗಿರುವ ಪಾರ್ಕ್ಗಳನ್ನು ಅಭಿವೃದ್ದಿಪಡಿಸಲು ಹಣವಿನಿಯೋಗ ಮಾಡಿದ್ದರೆ ಚೆನ್ನಾಗಿರುತಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಸೋಮಶೇಖರ ಲ್ಯಾವಿಗೆರೆ, ಸ್ವರೂಪ್ ಐ.ಜಿ., ಅನ್ವರ್ ಭಾಷಾ, ಶ್ರೀನಾಥ್, ಯಶವಂತ್ ಪಣಿ, ಮನೋಜ್ ಕುಗ್ವೆ, ಚಿಂಟು ಸಾಗರ್, ಚಿನ್ಮಯ್, ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಇನ್ನಿತರರು ಹಾಜರಿದ್ದರು.