ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಫೆ. 5 ರೊಳಗೆ ನಿವೇಶನ ನೀಡದಿದ್ದರೆ, ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಹೇಳಿದರು.
ಅವರು ಇಂದು ಮಥುರಾ ಪ್ಯಾರಡೈಸ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತರ ಪರವಾಗಿ ಮಾತನಾಡಿ, ವಿಮಾನ ನಿಲ್ದಾಣಕ್ಕಾಗಿ ಸುಮಾರು 305 ಕ್ಕೂ ಹೆಚ್ಚು ರೈತರಿಗೆ ನಿವೇಶನ ಹಂಚಿಕೆಯಾಗಬೇಕಾಗಿದೆ. ಹಾಗೆಯೇ ವಿನಾಯಕ ನಗರದ 51 ಮಂದಿ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಿ ಈಗ ಅದನ್ನು ವಜಾ ಮಾಡಲಾಗಿದೆ. ಇದರ ವಿರುದ್ಧ ಫೆ. 5 ರ ನಂತರ ವಿಮಾನ ನಿಲ್ದಾಣದ ಮುಂಭಾಗ ಸಂತ್ರಸ್ತ ರೈತರು, ರೈತ ಮುಖಂಡರು, ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
2007 ರಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ವಿಮಾನ ನಿಲ್ದಾಣಕ್ಕಾಗಿ ಸೋಗಾನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ರೈತರ ಮನವೊಲಿಸಿ, ಸಂತ್ರಸ್ತರಿಗೆ ಉದ್ಯೋಗ, ನಿವೇಶನ ನೀಡುವುದಾಗಿ ತಿಳಿಸಿ ಭೂಮಿ ವಶಪಡಿಸಿಕೊಂಡಿದ್ದರು. ಈಗ 15 ವರ್ಷ ಕಳೆದರೂ ಕೂಡ ಯಾವುದೇ ಸಂತ್ರಸ್ತರ ನೆರವಿಗೆ ಬಂದಿಲ್ಲ. ನಿವೇಶನ ನೀಡಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಗ್ರಾಮಾಂತರ ಶಾಸಕರು ಈ ಹಿಂದೆ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಸಂತ್ರಸ್ತರು ಪ್ರತಿಭಟನೆ ಹಮ್ಮಿಕೊಂಡಿದ್ದಾಗ ಬಂದು 20 ದಿನಗಳೊಳಗೆ ನಿವೇಶನ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ, ಅವರೂ ಕೂಡ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಭೂಮಿ ಕಳೆದುಕೊಂಡ 305 ರೈತರಿಗೆ ನಿವೇಶನ ಹಂಚಿಕೆ ಮಾಡಬೇಕು. ಸಾಗುವಳಿ ಚೀಟಿ ನೀಡಿರುವ ರೈತರಿಗೆ ಪಹಣಿ ಏರಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದರು.
ಪಿ.ಎಲ್.ಡಿ. ಬ್ಯಾಂಕ್ ಉಪಾಧ್ಯಕ್ಷ ಆರ್. ವಿಜಯಕುಮಾರ್(ದನಿ) ಮಾತನಾಡಿ, ನಾವು ಅಭಿವೃದ್ಧಿಯ ವಿರೋಧಿಗಳಲ್ಲ, ನಮ್ಮ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಷಯವೇ ಸರಿ. ಆದರೆ, ಇದಕ್ಕಾಗಿ ತ್ಯಾಗ ಮಾಡಿದ ರೈತರನ್ನು ಸರ್ಕಾರ ಮರೆಯಬಾರದು. ವಿಮಾನ ನಿಲ್ದಾಣ ಉದ್ಘಾಟನೆಗೆ ತಡೆಯೊಡ್ಡುವುದು ನಮ್ಮ ಉದ್ದೇಶವಲ್ಲ. ನಮಗೆ ಬರಬೇಕಾದ ಪರಿಹಾರವನ್ನು ಪಡೆದುಕೊಳ್ಳುವುದಷ್ಟೇ ಎಂದರು.
ರನ್ ವೇ ಗೆ ಜಾಗ ಕಡಿಮೆಯಾದಾಗ ಶಾಸಕರ ನೇತೃತ್ವದಲ್ಲಿ ಸಭೆ ನಡೆದು ಸುಮಾರು 24 ಎಕರೆ ಭೂಮಿಯನ್ನು 13 ಜನರಿಂದ ವಶಪಡಿಸಿಕೊಳ್ಳಲಾಯಿತು. ಆಗ ಎಕರೆಗೆ 40 ಲಕ್ಷ ರೂ. ಕೊಡುವುದಾಗಿ ಸರ್ಕಾರದ ಪರವಾಗಿ ಶಾಸಕರು ಭರವಸೆ ನೀಡಿದ್ದರು. ಅದರಂತೆ ರೈತರು ಭೂಮಿ ಬಿಟ್ಟು ಕೊಟ್ಟರು ಎಂದರು.
ಆದರೆ, ಮುಂದೆ ಆಗಿದ್ದೇ ಬೇರೆ. ಸರ್ಕಾರದಿಂದ ಸುಮಾರು 10 ಕೋಟಿ ರೂ. ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾವಣೆಯಾಗಿದ್ದು, ಈ ಸಂದರ್ಭದಲ್ಲಿ ಸರ್ಕಾರ ಉಪ ವಿಭಾಗಾಧಿಕಾರಿಗಳನ್ನು ಬಳಸಿಕೊಂಡು ಬಗರ್ ಹುಕುಂ ಜಮೀನು ನೀಡಿದ್ದೀರಿ. ನಿಮಗೆ ಪಹಣಿಯೆಲ್ಲ ತಪ್ಪಾಗಿ ಕೊಡಲಾಗಿದೆ. ಆದ್ದರಿಂದ ಪರಿಹಾರ ನೀಡಲು ಆಗುವುದಿಲ್ಲ ಎಂದು ಕ್ಯಾತೆ ತೆಗೆದಿದ್ದಾರೆ. ರೈತರಿಗೆ ಖಾತೆಯಾಗಿದ್ದರೂ, ಪಹಣಿ ಇದ್ದರೂ, ಅದರ ಮೇಲೆ ಸಾಲ ಪಡೆದಿದ್ದರೂ ಈ ರೀತಿ ರೈತರನ್ನು ವಂಚಿಸಿ ಈಗ ಅವರಿಗೆ ಪರಿಹಾರ ಕೊಡಲು ಆಗುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಅದಲ್ಲದೇ, 304 ಜನರಿಗೆ ನಿವೇಶನ ನೀಡುವ ಭರವಸೆ ಕೂಡ ಹಾಗೆಯೇ ಉಳಿದಿದೆ. ಗೃಹ ಮಂಡಳಿಯವರು 25 ಕೋಟಿ ರೂ. ಕಟ್ಟಿದರೆ ನಿಮಗೆಲ್ಲರಿಗೂ ನಿವೇಶನ ನೀಡುತ್ತೇವೆ ಎಂದು ಹೇಳುತ್ತಾರೆ. ಸರ್ಕಾರ ತಕ್ಷಣವೇ ಅವರಿಗೆ ಹಣ ನೀಡಿ ರೈತರಿಗೆ ನಿವೇಶನ ನೀಡಿ ಸೋಗಾನೆ ರೈತರನ್ನು ನೆಮ್ಮದಿಯಾಗಿರಲು ಬಿಡಬೇಕು. ಇಲ್ಲದಿದ್ದರೆ ಬೃಹತ್ ಹೋರಾಟ ಅನಿವಾರ್ಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತರಾದ ರಂಗಪ್ಪ, ರಮೇಶ್, ಶಿವಕುಮಾರ್, ಗಣೇಶ್, ಬಸವರಾಜ್, ಸಿದ್ಧಯ್ಯ, ಅರುಣ್, ಅನಿಲ್, ಪುಟ್ಟರಾಜು, ಮಾರುತಿ, ಪೆರಿಸ್ವಾಮಿ, ಮಂಜಣ್ಣ ಇದ್ದರು.