ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ನಗರವ್ಯಾಪ್ತಿ ರಸ್ತೆಗಳನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಗಣಪತಿ ದೇವಸ್ಥಾನದ ಸಮೀಪ ಬುಧವಾರ ನಗರಸಭೆ ವತಿಯಿಂದ ಜಾತ್ರೆ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ರಸ್ತೆ ಮರು ಡಾಂಬಾರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಅಮ್ಮನವರ ರಥೋತ್ಸವ ಮೆರವಣಿಗೆ ಸಾಗುವ ಮುಖ್ಯರಸ್ತೆಗಳನ್ನು ಮೊದಲ ಹಂತದಲ್ಲಿ ಅಭಿವೃದ್ದಿಗೆ ಕೈಗೆತ್ತಿಕೊಳ್ಳಲಾಗಿದೆ. ಇದರ ಜೊತೆಗೆ ಜನ ಸಂಚಾರ ಇರುವ ರಸ್ತೆಗಳ ಅಭಿವೃದ್ದಿಗೆ ನಗರಸಭೆ ಮತ್ತು ಪಿಡಬ್ಲ್ಯೂಡಿ ಇಲಾಖೆಯಿಂದ ಯೋಜನೆ ರೂಪಿಸಲಾಗಿದ್ದು, ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಾತ್ರೆ ಸಂದರ್ಭದಲ್ಲಿ ಪೂಜಾವಿಧಿವಿಧಾನ ದೇವಸ್ಥಾನ ಸಮಿತಿ ನೋಡಿಕೊಳ್ಳುತ್ತದೆ. ಸರ್ಕಾರದ ವತಿಯಿಂದ ಜಾತ್ರೆ ಸಸೂತ್ರವಾಗಿ ನಡೆಯಲು ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
ಬೀದಿದೀಪ, ಸ್ವಚ್ಚತೆ, ಸಮರ್ಪಕ ಕುಡಿಯುವ ನೀರು ಪೂರೈಕೆ ಬಗ್ಗೆ ನಗರಸಭೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಬೀದಿದೀಪ ಇಲ್ಲದ ಕಡೆ ತಕ್ಷಣ ಬೀದಿದೀಪ ಅಳವಡಿಸಲು ಸೂಚಿಸಲಾಗಿದ್ದು, ಸಂಚಾರ ಸುವ್ಯವಸ್ಥೆಗಾಗಿ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದ್ದು, ವಾಹನಗಳನ್ನು ನಗರ ಪ್ರದೇಶದಿಂದ ಹೊರಗೆ ನಿಲ್ಲಿಸಿ ಬಸ್ ಸೌಲಭ್ಯದ ಮೂಲಕ ನಗರದೊಳಗೆ ಜನರನ್ನು ಕರೆದುಕೊಂಡು ಬರುವ ಚಿಂತನೆ ನಡೆಸಲಾಗಿದೆ. ಜಾತ್ರೆ ಯಶಸ್ವಿಯಾಗಿ ನಡೆಸಲು ಸರ್ವಸನ್ನದರಾಗುತ್ತಿದ್ದೇವೆ ಎಂದು ತಿಳಿಸಿದರು.
ಜ. ೨೮ ಮತ್ತು ೨೯ರಂದು ಕೆರೆಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಬಗ್ಗೆ ಸಹ ಸರ್ಕಾರದ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಕೆರೆಹಬ್ಬದಲ್ಲಿ ನಡೆಸುವ ಆಹಾರ ಮೇಳದಲ್ಲೂ ರಿಯಾಯಿತಿ ದರದಲ್ಲಿ ಆಹಾರ ನೀಡಲು ಸೂಚನೆ ನೀಡಲಾಗಿದೆ. ಕೆರೆ ಸುತ್ತಲೂ ದೀಪ ಅಳವಡಿಸುವುದು, ಗಣಪತಿ ಕೆರೆಗೆ ಸಾಗರಾರತಿಯಂತಹ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಣಪತಿ ಕೆರೆ ಕಾಮಗಾರಿ ಬಗ್ಗೆ ಕೆಲವರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಮುಂದಿನ ಆರು ತಿಂಗಳ ನಂತರ ಟೀಕೆಗೆ ಸಮರ್ಪಕ ಉತ್ತರ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಪ್ರಮುಖರಾದ ಬಿ.ಎಚ್.ಲಿಂಗರಾಜ್, ಕುಸುಮ ಸುಬ್ಬಣ್ಣ, ಪ್ರೇಮ ಸಿಂಗ್, ಮೈತ್ರಿ ಪಾಟೀಲ್, ಸವಿತಾ ವಾಸು, ರತ್ನಾಕರ ಶೇಟ್, ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ, ವಿಠ್ಠಲ್ ಹೆಗಡೆ, ರಾಜೇಶ್ ಇನ್ನಿತರರು ಹಾಜರಿದ್ದರು