ಹಿಂದಿನ ಮೈಸೂರು ಮಹಾರಾಜರ ವೈಭವವನ್ನು ಕಾಣಬೇಕಾದರೆ ಅವರ ಹಾಗೆ ದೂರದರ್ಶಿತ್ವದ ಯೋಜನೆಗಳನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ರೂಪಿಸಬೇಕಾಗಿದೆ ಎಂದು ಮೈಸೂರು ಮಹಾ ಸಂಸ್ಥಾನದ ಶ್ರೀಮನ್ ಮಹಾರಾಜರಾದ ಶ್ರೀ ಯಧುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.


ಅವರು ಇಂದು ನಗರದ ಸರ್‌ಎಂವಿ ರಸ್ತೆಯ ಡಿವಿಎಸ್ ಕಾಲೇಜು ಆವರಣದಲ್ಲಿ ದೇಶೀಯ ವಿದ್ಯಾ ಶಾಲಾ ಸಮಿತಿ ಡಿವಿಎಸ್ ಪದವಿ ಪೂರ್ವ (ಸ್ವತಂತ್ರ ಕಾಲೇಜ್) ಶಿವಮೊಗ್ಗ ಇದರ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ಹಿಂದಿನ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಪ್ರಜೆಗಳು ಮತ್ತು ಆಡಳಿತ ವರ್ಗ ಮೈಸೂರು ಸಂಸ್ಥಾನಕ್ಕಾಗಿ ಕೆಲಸ ಮಾಡುತ್ತಿದ್ದರು. ಮತ್ತು ಅತ್ಯಂತ ಪ್ರಾಮಾಣಿಕತೆ ಹಾಗೂ ಆದರ್ಶಮಯವಾಗಿ ರಾಜರ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದರು. ಹಾಗಾಗಿ ಅಂದು ಮಹಾರಾಜರು ಕಟ್ಟಿದ ಸಂಸ್ಥೆಗಳು ನೂರಾರು ತಲೆಮಾರಿಗೆ ಉಪಯೋಗಕ್ಕೆ ಬೀಳುವಂತಾಗಿದೆ. ಅವರ ದೂರದರ್ಶಿತ್ವದ ಕೊಡುಗೆಗಳು ಶಿವಮೊಗ್ಗದಲ್ಲೂ ಕಾಣಬಹುದು. ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನೂರು ವರ್ಷ ಪೂರೈಸಿ ಇನ್ನು ಯಶಸ್ವಿಯಾಗಿ ಮುಂದುವರೆಸಿದೆ. ಯಾವ ಬೀಜ ನೆಟ್ಟರೆ ಉತ್ತಮ ಫಲ ಸಿಗುತ್ತದೆ ಎಂಬ ಅರಿವು ಅವರಿಗಿತ್ತು. ಕಾಡನ್ನು ಮತ್ತು ಪರಿಸರವನ್ನು ಉಳಿಸಿ ವನ್ಯ ಜೀವಿಗಳನ್ನು ಸಂರಕ್ಷಿಸಿ ಯಾರಿಗೂ ಧಕ್ಕೆಯಾಗದ ರೀತಿಯಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದರು ಎಂದರು.


ಸಂಸ್ಥೆಗಳನ್ನು ಕಟ್ಟುವಾಗ ನೂರಾರು ವರ್ಷ ಯೋಚನೆಮಾಡಿ ಕಟ್ಟಬೇಕಾಗಿದೆ. ಗ್ರಾಮ ಮತ್ತು ನಗರಗಳಲ್ಲಿ ಪರಿಸರವನ್ನು ಉಳಿಸಬೇಕಾಗಿದೆ. ಅದಕ್ಕಾಗಿ ಪೂರ್ವಜರ ಪದ್ಧತಿಯನ್ನು ಅನುಸರಿಸಬೇಕು. ಈಗ ಎಲ್ಲರಿಗೂ ಸುಲಭದ ಕೆಲಸ ಕೂಡ ಕಷ್ಟವಾಗಿದೆ. ಮನೆಯಿಂದ ಯಾರು ಕೈಚೀಲ ತೆಗೆದುಕೊಂಡು ಹೋಗಲ್ಲ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಸಂಪೂರ್ಣ ನಾಶವಾಗುತ್ತಿದೆ. ದೂರದಲ್ಲಿ ಸುಂದರವಾಗಿ ಕಾಣುತ್ತದೆ. ಹತ್ತಿರ ಬಂದಾಗ ಸ್ವಚ್ಚತೆಯಿಲ್ಲದ್ದು ಗಮನಕ್ಕೆ ಬರುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಪರಿಸರ ನಾಶವಾದರೆ ಸಮಾಜವೇ ನಾಶವಾದಂಗೆ. ಡಿವಿಎಸ್ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಧಾನ ಮಾಡಿದೆ. ಅದೇ ರೀತಿ ಅತ್ಯುತ್ತಮ ಸಂಸ್ಥೆಗಳು ಕಟ್ಟಬೇಕಾಗಿದೆ. ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದ ಈ ಕಾಲದಲ್ಲಿ ಎಲ್ಲರೂ ಕೂಡ ನಮ್ಮ ರಾಜ್ಯ, ದೇಶ ಬಗ್ಗೆ

ಅಭಿಮಾನವಿಟ್ಟು ಕೆಲಸ ಮಾಡಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮಹಾರಾಜರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಹಲವಾರು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು. ಡಿವಿಎಸ್ ಸಂಸ್ಥೆಯ ವತಿಯಿಂದ ಮಹಾರಾಜರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಿವಿಎಸ್ ಸಂಸ್ಥೆಯ ಅಧ್ಯಕ್ಷರಾದ ಕೆ.ಎನ್.ರುದ್ರಪ್ಪ ಕೊಳಲೆ, ಉಪಾಧ್ಯಕ್ಷರಾದ ಎಸ್.ಪಿ.ದಿನೇಶ್, ಕಾರ್ಯದರ್ಶಿ ಎಸ್.ರಾಜಶೇಖರ್, ಸಹ ಕಾರ್ಯದರ್ಶಿ ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ಎಂ.ರಾಜು, ಜಿ.ಮಧುಸೂದನ್, ಡಿ.ಬಿ.ಅವಿನಾಶ್, ಹೆಚ್.ಮಂಜುನಾಥ್, ಎನ್.ಆರ್.ನಿತಿನ್, ಬಿ.ಗೋಪಿನಾಥ್, ಕೆ.ಬಸಪ್ಪಗೌಡ, ಡಾ.ಎಂ.ವೆಂಕಟೇಶ್, ಹೆಚ್.ಸಿ.ಉಮೇಶ್ ಮತ್ತಿತರರಿದ್ದರು. (ಫೋಟೊ ಇದೆ)

By admin

ನಿಮ್ಮದೊಂದು ಉತ್ತರ

error: Content is protected !!