ಶಿವಮೊಗ್ಗ, ಶಿವಪ್ಪನಾಯಕ ಮಾರುಕಟ್ಟೆ ಲೀಜ್ ಅವಧಿ ವಿಸ್ತರಣೆ ಬಗ್ಗೆ ಕಾನೂನು ಬಾಹಿರ ವಾಗಿ ವಿಷಯ ಮಂಡಿಸಿರುವ ಕುರಿತು ತನಿಖಾ ವರದಿ ಬಗ್ಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇಂದು ಭಾರಿ ಗದ್ದಲ ಉಂಟಾಗಿ ವಿಪಕ್ಷಗಳ ಸದಸ್ಯರು ಸದನದ ಬಾವಿಗೆ ನುಗ್ಗಿ ಆಡಳಿತ ಪಕ್ಷದ ನಾಯಕರ ವಿರುದ್ಧ ಕಿಕ್ಬ್ಯಾಕ್ ಆರೋಪ ಮಾಡಿದ್ದರಿಂದ ಮತ್ತು ವರದಿಯ ಬಗ್ಗೆ ಚರ್ಚೆಗೆ ಅವಕಾಶ ನೀಡಲೇಬೇಕೆಂದು ಆಗ್ರಹಿಸಿ ಪಟ್ಟು ಹಿಡಿದು ಧರಣಿಗೆ ಕುಳಿತಿದ್ದರಿಂದ ಸಭೆಯನ್ನು ಮೇಯರ್ ಅನಿವಾರ್ಯವಾಗಿ ಮುಂದೂಡುವ ಪರಿಸ್ಥಿತಿ ಉಂಟಾಯಿತು.
ಏ.೧೨ರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಗರದ ಅಮೀರ್ ಅಹಮ್ಮದ್ ವೃತ್ತದಲ್ಲಿರುವ ಮಹಾನಗರ ಪಾಲಿಕೆಯ ಅಧೀನದ ಶಿವಪ್ಪ ನಾಯಕ ಮಾರುಕಟ್ಟೆ ಲೈಸೆನ್ಸ್ದಾರರಾದ ಬ್ಯಾರೀಸ್ ಗೋಲ್ಡನ್ ಹೋಲ್ಡಿಂಗ್ಸ್ ಪ್ರೈ.ಲಿ. ಸಂಸ್ಥೆಯವರು ಮನವಿ ಸಲ್ಲಿಸಿ ಲೈಸನ್ಸ್ ಅವಧಿಯನ್ನು ೩೨ ವರ್ಷಗಳಿಂದ ೯೯ ವರ್ಷಗಳವರೆಗೆ ಮುಂದುವರೆಸಿಕೊಡುವ ಬಗ್ಗೆ ಹಾಗೂ ಲಾಕ್ಡೌನ್ ಅವಧಿಯಲ್ಲಿನ ಏಪ್ರಿಲ್ ೨೦೨೧ ರಿಂದ ಸೆಪ್ಟೆಂಬರ್ ೨೦೨೧ರ ವರೆಗಿನ ಅವಧಿಗೆ ಬಾಡಿಗೆ ರಿಯಾಯಿತಿ ನೀಡುವ ಕುರಿತು ಸಲ್ಲಿಸಿರುವ ಮನವಿಯನ್ನು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವ ವಿಚಾರವನ್ನು ಸಾಮಾನ್ಯ ಸಭೆಯ ವಿಷಯ ಸಂಖ್ಯೆ ೧೭ರಲ್ಲಿ ಮಂಡಿಸಲಾಗಿತ್ತು. ಈ ಬಗ್ಗೆ ಸದರಿ ಸಭೆಯಲ್ಲಿ ಚರ್ಚಿಸಲಾಗಿ ಏ.೧೨, ೨೦೨೧ ರಂದು ಪಾಲಿಕೆಯ ಸಾಮಾನ್ಯ ಸಭೆಗೆ ಮಹಾಪೌರರು, ಆಯುಕ್ತರು, ಹಾಗೂ ಪರಿಷತ್ ಕಾರ್ಯದರ್ಶಿಯ ಗಮನಕ್ಕೂತಾರದೆ ನಿಯಮಾನುಸಾರ ಅನುಮೋದನೆ ಪಡೆಯದೆ ಕಾನೂನು ಬಾಹಿರವಾಗಿ ವಿಷಯ ಮಂಡಿಸಲಾಗಿದ್ದು, ಈ ಬಗ್ಗೆ ವಿಪಕ್ಷ ನಾಯಕರು ಹಲವುಬಾರಿ ಪ್ರತಿಭಟನೆ ನಡೆಸಿದ್ದು, ಈ ಬಗ್ಗೆ ಪರಿಶೀಲಿಸಿ ವರದಿ ನೀಡಲು ಸಮಿತಿ ರಚಿಸಬೇಕೆಂದು ಆಗ್ರಹಿಸಿದ್ದರು.
ತನಿಖಾ ಸಮಿತಿಗೆ ಜುಬೇರುಲ್ಲಾ ಲಿಖಿತ ಹೇಳಿಕೆ ನೀಡಿ ೦೨.೦೪.೨೦೨೧ ರಂದು ಸಭೆಯ ಅಜೆಂಡಾ ತಯಾರಿಸುತ್ತಿದ್ದ ಸಮಯದಲ್ಲಿ ಪರಿಷತ್ ಕಾರ್ಯದರ್ಶಿ ಯವರು ಮೊಬೈಲ್ ಕರೆ ಮಾಡಿ ಆಡಳಿತ ಪಕ್ಷದ ನಾಯಕರು ಒಂದು ವಿಷಯವನ್ನು ಸಭೆಗೆ ಸೇರಿಸಬೇಕೆಂದು ತಿಳಿಸಿದ್ದು, ಅವರಿಗೆ ಕರೆ ಮಾಡುವಂತೆ ಹಾಗೂ ಅವರು ತಿಳಿಸಿದ ವಿಚಾರವಾಗಿ ಆಯುಕ್ತರ ಮತ್ತು ಮಹಾಪೌರರ ಅನುಮೋದನೆ ಪಡೆದು ವಿಷಯವನ್ನು ಸಭೆಗೆ ಸೇರಿಸುವಂತೆ ತಿಳಿಸಿದ್ದರು. ಈ ಬಗ್ಗೆ ನಾನು ಆಡಳಿತ ಪಕ್ಷದ ನಾಯಕರಿಗೆ ಕರೆ ಮಾಡಿ ಕೇಳಿದಾಗ ಅವರ ಸೂಚನೆಯ ಮೇರೆಗೆ ಮತ್ತು ಅವರು ಈ ವಿಚಾರ ಸ್ಥಾಯಿ ಸಮಿತಿಯಲ್ಲಿ ಈಗಾ ಗಲೇ ಚರ್ಚೆಆಗಿದೆ ಎಂದು ತಿಳಿಸಿದ ಮೇರೆಗೆ ಸಭೆಯ ಅಜೆಂಡಾದಲ್ಲಿ ಸೇರಿಸಿರುತ್ತೇನೆ ಇದರಲ್ಲಿ ನನ್ನ ದುರುದ್ದೇಶ ಏನು ಇರುವುದಿಲ್ಲ. .
ಆದರೆ ಆಯುಕ್ತರ ಗಮನಕ್ಕೆ ತರದೆ ಸಭೆಗೆ ಮಂಡಿಸಿರುವುದು ನನ್ನ ತಪ್ಪಾಗಿರುತ್ತದೆ. ಆದ್ದರಿಂದ ನನ್ನ ವಿರುದ್ಧ ಶಿಸ್ತಿನ ಕ್ರಮಕೈಗೊಳ್ಳಬಾ ರದೆಂದು ವಿನಂತಿಸಿರುತ್ತಾರೆ.
ನಂತರ ಆಯುಕ್ತರು ಮತ್ತು ಮಹಾಪೌರರು ವಿಷಯ ನಿರ್ವಾಹಕರಿಗೆ ಅಕ್ರಮ ಅಜೆಂಡಾ ಸೇರ್ಪಡೆ ಬಗ್ಗೆ ಕಾರಣ ಕೇಳಿ ನೋಟೀಸ್ ನೀಡಿ ರುತ್ತಾರೆ. ಸಭೆಗೆ ಮಂಡನೆಯಾದ ಕರಡುಪ್ರತಿ ಯಲ್ಲಿ ಆಯುಕ್ತರ ಮತ್ತು ಮಹಾಪೌರರ ಅನುಮೋದನೆಯಾಗಲಿ ಸಹಿಯಾಗಲಿ ಪಡೆದಿರುವುದಿಲ್ಲ. ಮೇಯರ್ ಕೂಡ ಈ ಬಗ್ಗೆ ಆಯುಕ್ತರಿಗೆ ಪತ್ರಬರೆದು ವಿನಾಕಾರಣ ನನ್ನ ಹೆಸರಿಗೆ ಕಳಂಕ ಬರುವ ಹಾಗೆ ವರ್ತಿಸಿದ ಸಿಬ್ಬಂದಿಯನ್ನು ಶಿಸ್ತುಕ್ರಮ ಕೈಗೊಳ್ಳುವಂತೆ ತಿಳಿಸಿರುವುದರಿಂದ ಆಯುಕ್ತರು ಜಿಲ್ಲಾಧಿಕಾರಿ ಗಳಿಗೆ ಜುಬೇರುಲ್ಲಾ ಮೇಲೆ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮಾಜಿ ಮೇಯರ್ ಸುನಿತಾ ಅಣ್ಣಪ್ಪ ಮಾತ ನಾಡಿ, ಯಾರೇ ಪೋನ್ಮಾಡಿ ಹೇಳಿದ್ದರೂ ಅಜೆಂಡಾದಲ್ಲಿ ಸೇರಿಸಿ ಅದನ್ನು ಸಂಬಂಧ ಪಟ್ಟವರ ಗಮನಕ್ಕೆ ತರುವುದು ಅಧಿಕಾರಿಗಳ ಜವಾಬ್ದಾರಿ ಅವರಿಗೆ ಎಲ್ಲಾ ವಿಷಯಗಳ ಮಾಹಿತಿ ಇರಬೇಕು. ಇದರ ಸಂಪೂರ್ಣ ಹೊಣೆ ಅಧಿಕಾರಿಗಳದ್ದೇ ಎಂದು ವಾದಿಸಿದರು.
ವಿಪಕ್ಷ ನಾಯಕಿ ರೇಖಾ ರಂಗನಾಥ್, ಪಾಲಿಕೆ ಸದಸ್ಯರಾದ ನಾಗರಾಜ್ ಕಂಕಾರಿ, ಯೋಗೀಶ್, ರಮೇಶ್ ಹೆಗ್ಡೆ, ಯಮುನಾರಂಗೇ ಗೌಡ, ಆರ್.ಸಿ.ನಾಯಕ್, ಎಲ್ಲರೂ ಕೂಡ ಒಕ್ಕೊರಲಿನಿಂದ ಈ ಪ್ರಕರಣದ ಹಿಂದೆ ಆಡಳಿತ ಪಕ್ಷದ ನಾಯಕರೇ ಪ್ರಮುಖ ಕಾರಣ ಎಂದು ಗದ್ದಲ ಎಬ್ಬಿಸಿದರು.
ಇಂದಿನ ಸಾಮಾನ್ಯ ಸಭೆಯ ಬೆಳಗ್ಗಿನ ಅವಧಿ ಸಂಪೂರ್ಣವಾಗಿ ಶಿವಪ್ಪ ನಾಯಕ ಮಾರುಕಟ್ಟೆಯ ಲೀಜ್ ಅವಧಿಗೆ ಬಲಿಯಾಗಿ ಬೇರೆ ಅಭಿವೃದ್ಧಿ ವಿಚಾರಗಳೆಲ್ಲ ನಗಣ್ಯವಾಯಿತು. ಸಭೆಯಲ್ಲಿ ಶಾಸಕ ಅಶೋಕ್ನಾಯ್ಕ್, ಡಿ.ಎಸ್.ಅರುಣ್ ಹಾಗೂ ಪಾಲಿಕೆಯ ಎಲ್ಲಾ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.