ತಾಲ್ಲೂಕಿನ ಕುದುರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಕ್ಕೋಡಿ ಬಳಿ ಶಾಲಾ ಪ್ರವಾಸಿ ಬಸ್ವೊಂದು ಪಲ್ಟಿ ಹೊಡೆದು ೨೫ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಧರ್ಮಪುರಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಮಂಗಳವಾರ ಪ್ರವಾಸಕ್ಕೆ ಹೊರಟಿದ್ದರು. ಬುಧವಾರ ಕೊಲ್ಲೂರು ಪ್ರವಾಸ ಮುಗಿಸಿ ಗುರುವಾರ ಬೆಳಿಗ್ಗೆ ಸಿಗಂದೂರಿಗೆ ಬರುತ್ತಿದ್ದಾಗ ವಕ್ಕೋಡಿ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.
ಬಸ್ನಲ್ಲಿ ೬೩ ವಿದ್ಯಾರ್ಥಿಗಳು ೫ಕ್ಕೂ ಹೆಚ್ಚು ಶಿಕ್ಷಕರು ಇದ್ದರು. ಅಪಘಾತದಲ್ಲಿ ೨೫ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹೊಡೆತ ಬಿದ್ದಿದ್ದು ಈ ಪೈಕಿ ಕೀರ್ತಿ ಕುಮಾರಿ ಮತ್ತು ರಾಜೇಶ್ ಎಂಬುವವರಿಗೆ ಗಂಭೀರ ಗಾಯವಾಗಿದ್ದರಿಂದ
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇನ್ನೋರ್ವ ವಿದ್ಯಾರ್ಥಿನಿ ವಿದ್ಯಾ ಎಂಬುವವರು ಗಂಭಿರವಾಗಿ ಗಾಯಗೊಂಡಿದ್ದು ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದರು.
ಗಾಯಗೊಂಡ ವಿದ್ಯಾರ್ಥಿಗಳನ್ನು ಸಾಗರ ಆಸ್ಪತ್ರೆಗೆ ಕರೆ ತರುವಲ್ಲಿ ಸಿಗಂದೂರು ಕ್ಷೇತ್ರದ ಅಂಬ್ಯುಲೆನ್ಸ್ ಸೇರಿದಂತೆ ಸರ್ಕಾರಿ ಅಂಬ್ಯುಲೆನ್ಸ್ ಪ್ರಮುಖಪಾತ್ರ ವಹಿಸಿದವು. ಘಟನೆ ವಿಷಯ ತಿಳಿಯುತ್ತಿದ್ದಂತೆಯೆ ಶಾಸಕ ಹಾಲಪ್ಪ ಹರತಾಳು ಉಪವಿಭಾಗೀಯ ಆಸ್ಪತ್ರೆ ವೈದ್ಯರಿಗೆ ಸೂಕ್ತ ಸೂಚನೆ ನೀಡಿ ತಕ್ಷಣ ಚಿಕಿತ್ಸೆ ನೀಡಲು ಸಲಹೆ ನೀಡಿದರು. ವಿದ್ಯಾರ್ಥಿಗಳನ್ನು
ಮೈಸೂರಿಗೆ ಕಳಿಸಲು ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿಕೊಟ್ಟರು.
ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಚಿಕಿತ್ಸೆ ನೀಡುವ ಜೊತೆಗೆ ಉಪಹಾರದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಘಟನೆ ನಡೆಯಿತು. ಆಸ್ಪತ್ರೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅಧಿಕಾರಿಗಳು ಭೇಟಿ ನೀಡಿ ಸಾಂತ್ವಾನ ಹೇಳಿದರು.