ಶಿವಮೊಗ್ಗ,
ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗೆ ೮೧೭ ಕೋಟಿ ರೂ. ಬಿಡುಗಡೆಯಾಗಿದ್ದು, ಈಗಾಗಲೇ ೭೮೦ ಕೋಟಿ ಹಣ ಖರ್ಚಾಗಿದೆ ಸ್ಮಾರ್ಟ್ ಸಿಟಿ ಕಾಮಗಾರಿಗಳೆಲ್ಲ ಕಳಪೆಯಾಗದೆ ಸಂತೃಪ್ತಿ ತಂದಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.


ಅವರು ಇಂದು ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.


ಇಂದು ಬೆಳಿಗ್ಗೆಯಿಂದಲೇ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪಾಲಿಕೆ, ಸೂಡಾ, ನಗರಾಭಿವೃದ್ಧಿ ಅಧಿಕಾರಿಗಳ ಜೊತೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಕಾಮಗಾರಿಗಳನ್ನು ಕಂಡು ಸಂತೃಪ್ತಿಪಟ್ಟಿ ದ್ದೇನೆ. ಕೆಲವು ಕಡೆ ಕಳಪೆ ಕಾಮಗಾರಿಯಾಗಿದೆ ಎಂದು ಪತ್ರಿಕೆಗಳಲ್ಲಿ, ದೃಶ್ಯಮಾಧ್ಯಮಗಳಲ್ಲಿ ಕೇಳಿದ್ದೆ. ಆದರೆ ಖುದ್ದಾಗಿ ವೀಕ್ಷಣೆ ಮಾಡಿದಾಗ ಎಲ್ಲಿಯೂ ಕಳಪೆಯಾಗಿದೆ ಎಂದು ಅನಿಸಲಿಲ್ಲ. ಆದರೂ ಕೂಡ ಅಕಸ್ಮಾತ್ ಕೆಲವು ಕಡೆ ಕಳಪೆಯಾಗಿದ್ದರೆ ಅದನ್ನು ನನ್ನ ಗಮನಕ್ಕೆ ತನ್ನಿ. ಕೂಡಲೇ ಸರಿಪಡಿಸುತ್ತೇನೆ ಎಂದರು.


ನಗರದಲ್ಲಿ ಸುಮಾರು ೧೧೦ ಕಿ.ಮೀ. ರಸ್ತೆ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ೧೦೪ ರಸ್ತೆ ಕಾಮಗಾರಿಗಳು ಮುಗಿದಿವೆ. ಎಲ್ಲಾ ಬಡಾವಣೆಗಳಲ್ಲೂ ಅಚ್ಚುಕಟ್ಟಾಗಿ ಕಾಮಗಾರಿ ನಡೆದಿದೆ. ಅಕಸ್ಮಾತ್ ಗುಣಮಟ್ಟ ಕಡಿಮೆಯಾಗಿದ್ದರೆ ಬಡಾವಣೆಗಳ ನಿವಾಸಿಗಳು ಗಮನಿಸಿ ಹೇಳಿದರೆ ಅದನ್ನು ಸರಿಪಡಿಸಲಾಗುವುದು. ಹಾಗೆಯೇ ಈಗಾಗಲೇ ೧೮ ಪಾರ್ಕ್‌ಗಳ ಅಭಿವೃದ್ಧಿಯಾಗಿದೆ. ೧೧೩ ಕನ್ಸರ್ವೆನ್ಸಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.


ಈ ಸಂದರ್ಭದಲ್ಲಿ ಸೂಡಾ ಅಧ್ಯಕ್ಷ ನಾಗರಾಜ್, ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಉಪಮೇಯರ್ ಲಕ್ಷ್ಮೀ ಶಂಕರ್ ನಾಯ್ಕ್, ಸದಸ್ಯರಾದ ಸುವರ್ಣಾ ಶಂಕರ್, ಪ್ರಭು, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!