ಶಿವಮೊಗ್ಗ : ಭ್ರಷ್ಟಾಚಾರ ನಾಗರಿಕ ಸಮಾಜಕ್ಕೆ ಅಂಟಿದ ಕಳಂಕ ಹಾಗೂ ಶಾಪವಾಗಿದೆ. ಅದನ್ನು ತೊಡೆದುಹಾಕುವ ತುರ್ತು ಅನಿವಾರ್ಯತೆ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ಹೇಳಿದರು.
ಅವರು ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಲೋಕಾಯುಕ್ತ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆಸೆ-ಆಮಿಷ ಭ್ರಷ್ಟಾಚಾರದ ಮೂಲವಾಗಿದೆ. ಬ್ರಿಟೀಷರು ಭ್ರಷ್ಟಾಚಾರದ ಪ್ರೇರಕರು. ಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ನೌಕರರು ತಾವು ಸೇವೆಗೆ ನಿಯುಕ್ತಿಗೊಳ್ಳುವ ಮುನ್ನ ಮಾಡಿದ ಪ್ರಮಾಣವನ್ನು ನೆನಪಿಸಿಕೊಳ್ಳಬೇಕು. ಸೇವೆಯಲ್ಲಿ ನಿರೀಕ್ಷೆಗಳನ್ನಿಟ್ಟುಕೊಳ್ಳದೆ ನಿಶ್ಕಲ್ಮಶ ಮನಸ್ಥಿತಿ ಹೊಂದಿದವರಾಗಿರಬೇಕು. ಭ್ರಷ್ಟಾಚಾರ ರಹಿತ ಜೀವನ ಸರಳ ಮತ್ತು ಸುಂದರ ಎಂದವರು ನುಡಿದರು.
ಮನುಷ್ಯನಿಗೆ ಬಯಕೆಗಳು ಸಹಜ. ಆದರೆ, ಅವುಗಳಿಗೆ ಮಿತಿಯಿರಲಿ. ವಿಲಾಸೀ ಬದುಕನ್ನು ನಿರ್ವಹಿಸಲು ಅತಿಯಾದ ಸಾಲ
ಮಾಡಿ ಬದುಕನ್ನು ದುಸ್ತರ ಮಾಡಿಕೊಳ್ಳದಂತೆ ಹಾಗೂ ಆದಾಯಕ್ಕೆ ತಕ್ಕಂತೆ ಶಿಸ್ತುಬದ್ಧ ಜೀವನ ರೂಪಿಸಿಕೊಳ್ಳಿ ಎಂದ ಅವರು ಭ್ರಷ್ಟಾಚಾರ ಅಲ್ಪಕಾಲ ಸಂತಸ ನೀಡಿದರೆ, ದೀರ್ಘಕಾಲದ ಮಾನಸಿಕ ನೋವನ್ನು ನೀಡಲಿದೆ. ನಾವು ಶುದ್ಧಹಸ್ತರಾಗಿದ್ದಾಗ ಆತಂಕದ ಪ್ರಶ್ನೆ ಉದ್ಭವಿಸುವುದಿಲ್ಲ. ಪೋಷಕರು ಮಕ್ಕಳಿಗೆ ಉತ್ತಮ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡಿ ಸತ್ಪ್ರಜೆಗಳನ್ನಾಗಿ ರೂಪಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಚಿತ್ರದುರ್ಗ ವಿಭಾಗದ ಲೋಕಾಯುಕ್ತ ಎಸ್ಪಿ ಎನ್.ವಾಸುದೇವರಾಮ ಅವರು ಮಾತನಾಡಿ, ಮುಕ್ತ ಮನಸ್ಸಿನಿಂದ ಸೇವೆ ಸಲ್ಲಿಸಬೇಕಾದ ಅಧಿಕಾರಿ-ನೌಕರರು ಭ್ರಷ್ಟಾಚಾರದ ಕೂಪಕ್ಕೆ ಬಲಿಯಾಗಿ, ನೆಮ್ಮದಿಯ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ತಪ್ಪೆಸಗಿದ ಯಾವುದೇ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸಂಸ್ಥೆಯು ಯಾವುದೇ ಅನುಕಂಪ ತೋರಿಸದೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಿದೆ. ಸೇವೆ ನೀಡುವ ಅಧಿಕಾರಿ ಪ್ರಾಮಾಣಿಕನಾಗಿದ್ದಾಗ ಲೋಕಾಯುಕ್ತ ಆತನ ಪರವಾಗಿ ನಿಲ್ಲಲಿದೆ. ಎಲ್ಲಾ ರೀತಿಯ ಸೇವಾ ಸೌಲಭ್ಯ ಪಡೆಯುವ ನೌಕರರು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಅಧಿಕಾರಿಗಳು ಸಕಾಲದಲ್ಲಿ ಕಡತ ವಿಲೇವಾರಿ ಮಾಡದೆ, ಅನಗತ್ಯ ವಿಳಂಬ ಮಾಡುವುದು ಕೂಡ ಅಕ್ಷಮ್ಯ. ಅಂತಹ ನೌಕರರ ವಿರುದ್ಧವೂ ಲೋಕಾಯುಕ್ತ ಮೊಕದ್ದಮೆ ದಾಖಲಿಸಲಿದೆ. ನೌಕರರು ತಮ್ಮ ಅಧಿಕಾರದ ಪರಿಮಿತಿಯೊಳಗೆ ಅರ್ಹರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಪರ ಜಿಲ್ಲಾಧಿಕಾರಿ ಡಾ|| ನಾಗೇಂದ್ರ ಎಫ್.ಹೊನ್ನಳ್ಳಿ ಅವರು ಮಾತನಾಡಿ, ಅನೇಕ ಇಲಾಖೆಗಳಲ್ಲಿ ಸಿಬ್ಬಂಧಿಗಳ ಕೊರತೆಯಿಂದಾಗಿ ಕಡತಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡುವುದು ಕಷ್ಟಸಾಧ್ಯವಾಗುತ್ತಿದೆ. ಆದಾಗ್ಯೂ ನೌಕರರು ಆದ್ಯತೆಯ ಮೇಲೆ ಕಡತಗಳ ತ್ವರಿತ ವಿಲೇವಾರಿಗೆ ಕ್ರಮ ವಹಿಸುವಂತೆ ಸೂಚಿಸಿದರು.
ಇ-ಆಫೀಸ್ ವ್ಯವಸ್ಥೆಯ ಅಳವಡಿಕೆಯಿಂದಾಗಿ ಕಚೇರಿಗೆ ಬರುವ ಪ್ರತಿ ಅರ್ಜಿಗಳನ್ನು ಶೀಘ್ರಗತಿಯಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ. ಇ-ಆಫೀಸ್ ವ್ಯವಸ್ಥೆಯಲ್ಲಿ ಅನಗತ್ಯ ವಿಳಂಬಕ್ಕೆ ಅವಕಾಶವಿಲ್ಲವಾಗಿದ್ದು, ಅಲ್ಪಾವಧಿಯಲ್ಲಿ ಸರದಿಯ ಮೇಲೆ ಕಡತ ವಿಲೇವಾರಿಯಾಗಲಿದೆ. ಸೇವೆಗೆ ನಿಯುಕ್ತರಾದ ಎಲ್ಲ ನೌಕರರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸೋಣ ಎಂದರು.
ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಡಿ.ಪ್ರಕಾಶ್, ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಮಾನು ಕೆ.ಎಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾಂiÀರ್iದರ್ಶಿ ರಾಜಣ್ಣ ಸಂಕಣ್ಣನವರ್, ಶಿವಮೊಗ್ಗ ಲೋಕಾಯುಕ್ತ ಎಸ್.ಪಿ. ಎನ್.ಮೃತ್ಯುಂಜಯ ಸೇರಿದಂತೆ ಜಿಲ್ಲಾ ವiಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.