ಸಾಗರ : ಇಲ್ಲಿನ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ಪಾವತಿ ಮಾಡದೆ ಓಡಾಡಿಸುತ್ತಿದ್ದ ವಾಹನಗಳ ಮೇಲೆ ದಾಳಿ ಮಾಡಿ 10.80 ಲಕ್ಷ ರೂ. ತೆರಿಗೆ ವಸೂಲಿ ಮಾಡಿದ್ದಾರೆ.
ಉಪವಿಭಾಗ ವ್ಯಾಪ್ತಿಯ ಶಿಕಾರಿಪುರ ಮತ್ತು ಆನಂದಪುರಂನಲ್ಲಿ ಖಚಿತ ಮಾಹಿತಿ ಮೇರೆಗೆ ತೆರಿಗೆ ಪಾವತಿ ಮಾಡದೆ ಓಡಾಡಿಸುತ್ತಿದ್ದ ಮೂರು ಜೆಸಿಬಿ, ಎರಡು ಬಸ್ ಮತ್ತು ಒಂದು ಲಾರಿಯನ್ನು ತಪಾಸಣೆಗೆ ಒಳಪಡಿಸಿದಾಗ ತೆರಿಗೆ ಪಾವತಿ ಮಾಡದೆ ಇರುವುದು ಬೆಳಕಿಗೆ ಬಂದಿದೆ.
ತಕ್ಷಣ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಪೊಲೀಸ್ ಠಾಣೆ ವಶಕ್ಕೆ ನೀಡಲಾಗಿದ್ದು, ಒಟ್ಟು ೧೦.೮೦ ಲಕ್ಷ ರೂ. ತೆರಿಗೆ ವಸೂಲಿ ಮಾಡಲಾಗಿದೆ.
ಸಾರಿಗೆ ಇಲಾಖೆಯ ಜಂಟಿ ಆಯುಕ್ತೆ ಗಾಯಿತ್ರಿ ದೇವಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಿರಿಯ ಮೋಟಾರ್ ವಾಹನ ನಿರೀಕ್ಷಕ ವಾಸುದೇವ್, ಸಿಬ್ಬಂದಿ ಉಮೇಶ್ ಕೆ.ಬಿ., ಚಾಲಕ ಪಂಚಾಕ್ಷರಿ ಪಾಲ್ಗೊಂಡಿದ್ದರು.