ಶಿವಮೊಗ್ಗ,
ಮಹಾನಗರ ಪಾಲಿಕೆ ವತಿಯಿಂದ ಆಚರಿ ಸುವ ದಸರಾ ೨೦೨೨ ಅಂಗವಾಗಿ ರಂಗದಸರಾ ಸೆ. ೨೭ ರಿಂದ ಅ. ೧ ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ರಂಗದಸರಾ ಸಮಿತಿ ಅಧ್ಯಕ್ಷ ಚನ್ನಬಸಪ್ಪ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ರಂಗದಸರಾದಲ್ಲಿ ರಂಗಕಲೆಗಳ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ರಂಗ ಸಮಾಗಮ, ಮೂಕಾಭಿನಯ ಸ್ಪರ್ಧೆ, ರಂಗತುಣಕು, ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ, ರಾಜ್ಯಮಟ್ಟದ ಹಾಸ್ಯನಾಟಕ ಸ್ಪರ್ಧೆ, ರಾಜ್ಯಮಟ್ಟದ ಹಾಸ್ಯ ನಾಟಕ ರಚನಾ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಬಾರಿ ಸರ್ಕಾರಿ ಶಾಲಾ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಿದ್ದು, ಅವರಿಂದಲೇ ೫ ಮಕ್ಕಳ ನಾಟಕ ಮಾಡಿಸುತ್ತಿದ್ದು, ಶಿಕ್ಷಣ ಇಲಾಖೆ ಇದಕ್ಕೆ ಸಹಕಾರ ನೀಡಿದೆ. ೫ ಹೊಸ ನಾಟಕಗಳು ಹೊಸ ನಿರ್ದೇ ಶಕರಿಂದ ಮೂಡಿ ಬರುತ್ತಿದ್ದು, ಒಂದು ತಂಡದಲ್ಲಿ ೩೦ -೩೫ ಮಕ್ಕಳು ಭಾಗವಹಿಸಲಿದ್ದಾರೆ ಎಂದರು.
ಸೆ. ೨೭ ರಂದು ಬೆಳಗ್ಗೆ ೧೦.೩೦ ಕ್ಕೆ ಮಹಾ ನಗರ ಪಾಲಿಕೆಯಿಂದ ರಂಗಕರ್ಮಿ ಹಾಲೇಶ್ ಅವರು ರಂಗ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ೧೧.೩೦ ಕ್ಕೆ ರಂಗಕರ್ಮಿ ಡಾ. ಗಜಾನನ ಶರ್ಮಾ ಅವರು ಕುವೆಂಪು ರಂಗ ಮಂದಿರದಲ್ಲಿ ರಂಗ ದಸರಾ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ೧೨.೩೦ ಕ್ಕೆ ಜಿಲ್ಲಾ ಮಟ್ಟದ ರಂಗ ಸಮಾಗಮ, ರಂಗ ಕಲಾವಿದರ ಗೋಷ್ಠಿ, ಮಧ್ಯಾಹ್ನ ೨.೩೦ ಕ್ಕೆ ಜಿಲ್ಲಾಮಟ್ಟದ ಮೂಕಾಭಿನಯ ಸ್ಪರ್ಧೆಗೆ ರಂಗ ನಿರ್ದೇಶಕ ಕಾಂತೇಶ್ ಕದರಮಂಡಲಗಿ ಚಾಲನೆ ನೀಡಲಿದ್ದಾರೆ. ಸಂಜೆ ೬.೩೦ ಕ್ಕೆ ರಂಗ ತುಣಕುಕು ಕಾರ್ಯಕ್ರಮಕ್ಕೆ ರಂಗಕರ್ಮಿ ರೇಣುಕಪ್ಪ ಚಾಲನೆ ನೀಡಲಿದ್ದಾರೆ ಎಂದರು.
ಸೆ. ೨೮ ರಂದು ಬುಧವಾರ ಬೆಳಗ್ಗೆ ೧೦.೩೦ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ(ಶಾಲಾ, ಕಾಲೇಜು ಮತ್ತು ಸಾರ್ವಜನಿಕ ವಿಭಾಗಗಳಲ್ಲಿ) ನಡೆಯಲಿದ್ದು, ರಂಗಕರ್ಮಿ ಹರಿಗೆ ಗೋಪಾಲಸ್ವಾಮಿ ಚಾಲನೆ ನೀಡಲಿದ್ದಾರೆ.
ಅಂದು ಸಂಜೆ ೫ ಗಂಟೆಗೆ ಕುವೆಂಪು ರಮಗಮಂದಿರದಲ್ಲಿ ರಾಜ್ಯಮಟ್ಟದ ಹಾಸ್ಯನಾಟಕ ಸ್ಪರ್ಧೆ ನಡೆಯಲಿದ್ದು, ಪರಿಸರ ಪ್ರೇಮಿ ಪ್ರೊ.. ಬಿ.ಎಂ. ಕುಮಾರಸ್ವಾಮಿ, ಡಿ.ಎಂ. ರಾಜಕುಮಾರ್ ಹಾಗೂ ಗಾಯತ್ರಿ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಲಿದ್ದಾರೆ.
ಸೆ. ೨೯ ರಂದು ಸಂಜೆ ೫ ಗಂಟೆಗೆ ರಾಜ್ಯಮಟ್ಟದ ಹಾಸ್ಯ ನಾಟಕ ಸ್ಪರ್ಧೆ ನಡೆಯಲಿದೆ. ಸೆ. ೩೦ ರಂದು ಶುಕ್ರವಾರ ಕುವೆಂಪು ರಂಗಮಂದಿರದಲ್ಲಿ ಸಂಜೆ ೫ ಗಂಟೆಗೆ ರಾಜ್ಯಮಟ್ಟದ ಹಾಸ್ಯನಾಟಕ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಹಾಸ್ಯ ನಾಟಕ ರಚನಾ ಸ್ಪರ್ಧೆ ನಡೆಯಲಿದೆ.
ನಾಟಕದಲ್ಲಿ ವಿಜೇತರಿಗೆ, ಹಾಸ್ಯ ನಾಟಕ ಸ್ಪರ್ಧೆಯಲ್ಲಿ ವಿಜೇತರಿಗೆ ಚಾಮುಂಡೇಶ್ವರಿ ಟ್ರೋಫಿ ನೀಡಲು ತೀರ್ಮಾನಿಸಲಾಗಿದೆ. ಹಾಸ್ಯನಾಟಕ ರಚನಾ ಸ್ಪರ್ಧೆಯಲ್ಲಿ ವಿಜೇತರಿಗೆ ಒಂದು ತಿಂಗಳ ನಂತರ ಬಹುಮಾನ ನೀಡುವ ಕಾರ್ಯಕ್ರಮ ಹಮ್ಮಿಕೊಂಡು ಅದೇ ದಿನ ಆ ನಾಟಕ ಪ್ರದರ್ಶಿಸ ಲಾಗುವುದು. ಹಾಸ್ಯ ನಾಟಕದ ರಚನೆ ಪುಸ್ತಕ ರೂಪದಲ್ಲಿ ಒಂದು ಸಾವಿರ ಪ್ರತಿ ಮುದ್ರಿಸಿ ನೀಡಲು ರಂಗಾಯಣ ನಿರ್ದೇಶಕರು ಮುಂದೆ ಬಂದಿದ್ದಾರೆ. ಸಾವಿರಕ್ಕೂ ಹೆಚ್ಚು ಮಕ್ಕಳು ರಂಗದಸರಾದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಂಗದಸರಾ ಸಮಿತಿ ಸದಸ್ಯರಾದ ಆರ್.ಸಿ. ನಾಯಕ್, ಪ್ರಭಾಕರ್, ಹೆಚ್. ಮೂರ್ತಿ, ಶಿರೀಶ್ ಮತ್ತಿತರರಿದ್ದರು.