ಶಿವಮೊಗ್ಗ, ಆ.25:
ಟಿಪ್ಪು ಸುಲ್ತಾನ್ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಕೆ.ಎಸ್. ಈಶ್ವರಪ್ಪ ಅವರಿಗೆ ಅನಾಮಧೇಯ ಬೆದರಿಕೆ ಪತ್ರವೊಂದು ಬಂದಿದ್ದು, ಈ ಕುರಿತಂತೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
ಈಶ್ವರಪ್ಪನವರ ನಿವಾಸಕ್ಕೆ ಬಂದಿರುವ ಈ ಅನಾಮಧೇಯ ಪತ್ರದಲ್ಲಿ ಸ್ವಾತಂತ್ರ ಸೇನಾನಿ, ನಮ್ಮ ಸಮಾಜದ ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿದ್ದೀಯಾ, ನಿನ್ನ ಬಾಯಿಂದ ಮುಸ್ಲಿಂ ಗುಂಡಾ ಎಂದು ಹೇಳಿದೆಯಾ? ಹಾವೇರಿಯ ಬ್ಯಾಡಗಿ ತಾಲೂಕಿನ ನಿಮ್ಮ ಕಾಲೇಜು ಕಟ್ಟಡಕ್ಕೆ ನಮ್ಮ ಮುಸ್ಲಿಂ ಬ್ರಿಕ್ಸ್ ಬೇಕೆ..? ಆದರೆ, ನಿನಗೆ ಮುಸ್ಲಿಮರು ಬೇಡ ಮಗನೇ ನಾಚಿಗೆಯಾಗಬೇಕು. ನಾಲಿಗೆ ಕಟ್ ಮಾಡುತ್ತೇವೆ ಹುಷಾರ್ ಮಗನೇ ಬಾಲ ಬಿಚ್ಚ ಬೇಡ ಎಂದು ಪತ್ರದ ಮೂಲಕ ಎಚ್ಚರಿಕೆ ನೀಡಲಾಗಿದೆ.
ಬೆದರಿಕೆ ಪತ್ರ ಬಂದ ಬೆನ್ನಲ್ಲೇ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗೆ ದೂರು ನೀಡಲಾಗಿದ್ದು, ಈ ಪತ್ರದ ಕುರಿತಾಗಿ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
ಈ ಹಿಂದೆಯೂ ಸಹ ಈಶ್ವರಪ್ಪನವರಿಗೆ ಹಲವು ಬಾರಿ ಬೆದರಿಕೆ ಕರೆ ಹಾಗೂ ಸಂದೇಶಗಳು ಬಂದಿದ್ದು, ಅವರಿಗೆ ಹಾಗೂ ಅವರ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿತ್ತು.