ಶಿವಮೊಗ್ಗ: ವಿಶ್ವದ ಏಳು ಅದ್ಭುತಗಳ ಮಾದರಿಯಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಲು ಇದೀಗ ರಾಜ್ಯವ್ಯಾಪಿ ಅಭಿಯಾನ ನಡೆಯುತ್ತಿದ್ದು, ವಿಶೇಷ ಅಭಿಯಾನದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬಹುದಾಗಿದೆ.
ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಲು ‘ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್’ ಸಂಸ್ಥೆಯು ಪ್ರವಾಸೋದ್ಯಮ ಇಲಾಖೆ ಸಹಭಾಗಿತ್ವದಲ್ಲಿ ವಿಶಿಷ್ಟ ಅಭಿಯಾನ ಹಮ್ಮಿಕೊಂಡಿದೆ. ವಿಶೇಷ ಅಭಿಯಾನದಲ್ಲಿ ಸಾರ್ವಜನಿಕರು ಸಹ ಪಾಲ್ಗೊಂಡು ಶಿವಮೊಗ್ಗದ ಅದ್ಭುತಗಳನ್ನು ಕರುನಾಡಿನ ಏಳು ಅದ್ಭುತಗಳ ಸಾಲಿನಲ್ಲಿ ನಿಲ್ಲಿಸುವ ಸುವರ್ಣಾವಕಾಶವಿದೆ.


ಶಿವಮೊಗ್ಗ ಜಿಲ್ಲೆಯ ನಾಲ್ಕು ಸ್ಥಳಗಳು ಈಗಾಗಲೇ ಕರ್ನಾಟಕದ ನೂರು ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ನಾಲ್ಕು ಸ್ಥಳಗಳಿಗೆ ವೋಟ್ ಮಾಡುವ ಮೂಲಕ ರಾಜ್ಯದ ಅದ್ಭುತವನ್ನಾಗಿ ಮಾಡಬಹುದು.
ಶಿವಮೊಗ್ಗದ ನಾಮ ನಿರ್ದೇಶನಗಳು : ರಾಜ, ರಾಕೆಟ್, ರೋರರ್, ಲೇಡಿ ಎಂಬ ಶರಾವತಿಯ ನಾಲ್ಕು ಧಾರೆಗಳು ಅಬ್ಬರಿಸಿ ಭೋರ್ಗರೆಯುವ ಜಗತ್ಪ್ರಸಿದ್ಧ ಜೋಗ ಜಲಪಾತ. ಸಹ್ಯಾದ್ರಿ ಶ್ರೇಣಿಯ ಮಳೆಕಾಡಿನಲ್ಲಿರುವ ಸಮುದ್ರಮಟ್ಟದಿಂದ ೧೩೫೪ ಮೀಟರ್ ಎತ್ತರದಲ್ಲಿರುವ ಚಾರಣಿಗರ ನೆಚ್ಚಿನ ತಾಣ ಕೊಡಚಾದ್ರಿ ಬೆಟ್ಟ. ದಕ್ಷಿಣದ ಚಿರಾಪುಂಜಿ ಎಂಬ ಹಿರಿಮೆ ಹೊಂದಿದ್ದ ಅದ್ಭುತ ಪ್ರಕೃತಿ ಸೌಂದರ್ಯದ, ಸೂರ್ಯಾಸ್ತ ವೀಕ್ಷಣೆಗೂ ಪ್ರಸಿದ್ಧ ತಾಣ ಆಗುಂಬೆ ಘಾಟಿ. ೧೫೦೦ ವರ್ಷ ಹಳೆಯ, ಹಲ್ಮಿಡಿಗಿಂತಲೂ ಪುರಾತನ ಶಾಸನ ತಾಳಗುಂದ ಶಿಲಾ ಶಾಸನ.

ಈಗಾಗಲೇ https:/www.7wondersofkarnataka.com
ನಲ್ಲಿ ನಾಮನಿರ್ದೇಶನಗೊಂಡಿರುವ ನೂರು ಅದ್ಭುತಗಳ ಸಾಲಿನಲ್ಲಿ ನಿಂತಿರುವ ಶಿವಮೊಗ್ಗದ ಈ ನಾಲ್ಕು ಸ್ಥಳಗಳ ಪೈಕಿ ನಿಮ್ಮ ಆಯ್ಕೆಯ ಸ್ಥಳಕ್ಕೆ ತಲಾ ೧೦ ವೋಟ್ ಮಾಡಿ ಇವನ್ನು ರಾಜ್ಯದ ಏಳು ಅದ್ಭುತಗಳನ್ನಾಗಿಸಬಹುದು.


ಪ್ರಸ್ತುತ ೧೦೦ ಅದ್ಭುತಗಳ ಪಟ್ಟಿಯಲ್ಲಿರುವ ಸ್ಥಳಗಳಲ್ಲಿ ಅತಿ ಹೆಚ್ಚು ವೋಟ್ ಪಡೆದ ಸ್ಥಳಗಳು ಮುಂದಿನ ಹಂತದಲ್ಲಿ ಅಂತಿಮ ೪೯ರ ಪಟ್ಟಿಗೆ ಬರಲಿವೆ. ನಂತರ ಅಂತಿಮ ೨೧ರ ಪಟ್ಟಿಯಲ್ಲಿ ಉಳಿದು ಬಳಿಕ ಪ್ರವಾಸೋದ್ಯಮ ಇಲಾಖೆ ತಜ್ಞರ ಸಮಿತಿಯ ಆಯ್ಕೆಯಂತೆ ಕರ್ನಾಟಕದ ಏಳು ಅದ್ಭುತಗಳ ಸಾಲಿನಲ್ಲಿ ನಿಲ್ಲಬಹುದು. ಹೀಗಾಗಿ ಶಿವಮೊಗ್ಗ ಜಿಲ್ಲೆಯ ಪ್ರತಿಯೊಬ್ಬರೂ ತಮ್ಮ ಪಾಲಿನ ಹತ್ತು ವೋಟ್‌ಗಳನ್ನು ತಮ್ಮ ನೆಚ್ಚಿನ ಸ್ಥಳಕ್ಕೆ ನೀಡಬಹುದು. ಜತೆಗೆ ಸ್ನೇಹಿತರು, ಕುಟುಂಬ ಸದಸ್ಯರೂ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬಹುದು.


ಏನಿದು ಅಭಿಯಾನ?: ಪ್ರಪಂಚದ ಏಳು ಅದ್ಭುತಗಳನ್ನು ಎಂದೋ ಹುಡುಕಿಯಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕ ಒಂದು ರಾಜ್ಯ ಹಲವು ಜಗತ್ತು’ ಎಂದೇ ಪ್ರಸಿದ್ಧಿ. ಇಂತಹ ಕರ್ನಾಟಕದ ಸುಂದರ ಕರಾವಳಿತೀರ, ದುರ್ಗಮ ಕಾನನ, ರಮಣೀಯ ಜಲಪಾತ, ಸಮುದ್ರ ತೀರಗಳು, ಐತಿಹಾಸಿಕ ಸ್ಥಳ ಹೀಗೆ ಹಲವು ಜಗತ್ತುಗಳನ್ನು ಒಳಗೊಂಡಿದೆ. ಈ ಪೈಕಿ ಏಳು ಅದ್ಭುತಗಳನ್ನು ಸಾರ್ವಜನಿಕರೇ ಗುರುತಿಸಲು ರೂಪಿಸಿರುವ ವೇದಿಕೆಯೇ ‘ಬನ್ನಿ ಹುಡುಕೋಣ ಕರ್ನಾಟಕದ ಏಳು ಅದ್ಭುತಗಳನ್ನು’ ಎಂಬ ಈ ಅಭಿಯಾನ.


ಯಾವ ಹಂತದಲ್ಲಿದೆ ಅಭಿಯಾನ?: ಮೇ ತಿಂಗಳಲ್ಲಿ ಚಾಲನೆ ದೊರೆತಿರುವ ಆರು ಹಂತದ ಈ ಅಭಿಯಾನ ಎರಡನೇ ಹಂತಕ್ಕೆ ತಲುಪಿದೆ. ಮೊದಲ ಹಂತದಲ್ಲಿ ಸಾರ್ವಜನಿಕರು ವೆಬ್‌ಸೈಟ್ ಮೂಲಕ ತಮ್ಮ ನೆಚ್ಚಿನ ಊರು, ಜಿಲ್ಲೆ, ತಾಲೂಕು ಸೇರಿ ರಾಜ್ಯದ ಯಾವುದೇ ಜಾಗದಲ್ಲಿ ತಾವು ನೋಡಿದ ಅದ್ಭುತ ಪ್ರವಾಸೀ ಸ್ಥಳ, ಪಾರಂಪರಿಕ ತಾಣ, ಅತ್ಯಾಧುನಿಕ ಕಟ್ಟಡ, ರಸ್ತೆ ಹೀಗೆ ಅದ್ಭುತ ಎನಿಸುವ ಸ್ಥಳದ ಫೋಟೊ ಅಪ್‌ಲೋಡ್ ಮಾಡಿ ಆ ಸ್ಥಳದ ವೈಶಿಷ್ಟ್ಯವನ್ನು ದಾಖಲು ಮಾಡಿ ನಾಮನಿರ್ದೇಶನ ಮಾಡಿದ್ದಾರೆ.
ಇದೀಗ, ಎರಡನೇ ಹಂತದಲ್ಲಿ ಸಾರ್ವಜನಿಕರಿಂದ ನಾಮನಿರ್ದೇಶನಗೊಂಡ ಅದ್ಭುತಗಳಲ್ಲಿ ೧೦೦ ಸ್ಥಳಗಳನ್ನು ಆಯ್ಕೆ ಮಾಡಿ, ಅತ್ಯದ್ಭುತ ತಾಣಗಳು ಯಾವುವು ಎಂಬ ಬಗ್ಗೆ ವೋಟಿಂಗ್ ನಡೆಯುತ್ತಿದೆ.
ವೋಟಿಂಗ್ ನಿಯಮ:

  • ಆಯ್ಕೆಯಾಗಿರುವ ನೂರು ಅದ್ಭುತಗಳಿಗೂ ವೋಟ್ ಮಾಡಬಹುದು.
  • ಪ್ರತಿಯೊಂದು ಅದ್ಭುತಕ್ಕೂ ಹತ್ತು ವೋಟ್ ಮಾಡಲು ಅವಕಾಶವಿರುತ್ತದೆ.
  • ಈ ಮೆಗಾ ಅಭಿಯಾನದ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ತಿಳಿಸಿ.
    -ತನ್ಮೂಲಕ ನಿಮ್ಮ ಜಿಲ್ಲೆಯ ಸ್ಥಳವನ್ನು ಅದ್ಭುತವನ್ನಾಗಿಸಿ.

By admin

ನಿಮ್ಮದೊಂದು ಉತ್ತರ

error: Content is protected !!