ಶಾಸಕರು ತಮ್ಮ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲು ಪ್ರಯತ್ನ ನಡೆದಿತ್ತು. ಅದಕ್ಕೆ ನಾನು ಕುಮ್ಮಕ್ಕು ನೀಡಿದ್ದೇನೆಂದು ಸುಳ್ಳು ಆರೋಪ ಮಾಡಿದ್ದಾರೆ. ಅಂತಹ ನೀಚ ಕೆಲಸಕ್ಕೆ ನಾನು ಇಳಿಯುವುದಿಲ್ಲ. ಅವರು ಹತಾಶರಾಗಿ ಪ್ರತಿಕ್ರಿಯಿಸುತ್ತಿದ್ದು ನನ್ನ ವಿರುದ್ಧ ಏನೇನೋ ಹೇಳುತ್ತಿದ್ದಾರೆ ಎಂದು ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಪ್ರತಿಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ತಮ್ಮ ವಿರುದ್ಧ ಇಂತಹ ಆರೋಪ ಬಂದಾಗ ಶಾಸಕ ಹಾಲಪ್ಪ ಅವರು ವೆಂಕಟೇಶ್ಮೂರ್ತಿ ಎಂಬುವವರ ವಿರುದ್ಧ ಇಂತಹುದೇ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಲು ಪ್ರಚೋದಿಸಿದಂತಹ ಪ್ರಕರಣ ನಡೆದಿತ್ತು. ನಾನು ಈವರೆಗೂ ಬೇರೆಯವರ ವಿರುದ್ಧ ಎಫ್ಐಆರ್ ಮಾಡಲು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿಲ್ಲ. ಶಾಸಕರು ಹೇಳೀಕೊಳ್ಳುವಂತೆ ಮೊನ್ನೆ ಕೂಡ ನಾನು ಹೋಗಿಲ್ಲ ಎಂದರು.
ನನ್ನ ಕಾಲದಲ್ಲಿ ಹೆಚ್ಚು ಎಫ್ಐಆರ್ ಆಗುತ್ತಿತ್ತು ಎಂದು ಶಾಸಕರು ಆರೋಪಿಸಿದ್ದಾರೆ.
ನನ್ನ ಅವಧಿಯಲ್ಲಿ ಕಾನೂನು ಪ್ರಕಾರ ಎಫ್ಐಆರ್ ಆಗುವ ಪ್ರಕರಣದಲ್ಲಿ ಹಸ್ತಕ್ಷೇಪ ನಡೆಯುತ್ತಿರಲಿಲ್ಲ. ಈಗ ಶಾಸಕರು ಕೇಸು ದಾಖಲಾಗಲು ಬಿಡುತ್ತಿಲ್ಲವಾದುದರಿಂದ ಈ ತರಹದ ಕಡಿಮೆ ಸಾಧನೆ ಸಾಧ್ಯವಾಗಿದೆ ಎಂದು ಬೇಳೂರು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಬೇಳೂರು, ಪ್ರಮುಖರಾದ ಮಹಾಬಲ ಕೌತಿ, ತಾರಾಮೂರ್ತಿ, ಸೋಮಶೇಖರ ಲ್ಯಾವಿಗೆರೆ, ಎಲ್.ಚಂದ್ರಪ್ಪ, ಆನಂದ್ ಭೀಮನೇರಿ, ರಾಘವೇಂದ್ರ, ಶ್ರೀನಾಥ್ ಹಾಜರಿದ್ದರು.