ಪ್ರತಿ ಪ್ರಜೆಯೂ ಗ್ರಾಹಕರೇ ಆಗಿದ್ದು, ಇಂದಿನ ಯುಗದಲ್ಲಿ ಗ್ರಾಹಕರಿಗೆ ನ್ಯಾಯಸಮ್ಮತವಾದ, ಸುರಕ್ಷಿತವಾದ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನ ಪಡೆಯುವ ಹಕ್ಕಿದೆ. ದೋಷಪೂರಿತ ವಸ್ತುಗಳನ್ನು ಖರೀದಿ ಮಾಡಿ ಮೋಸ ಹೋಗದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.


ಅವರು ಇಂದು ಭಾರತೀಯ ಮಾನಕ ಬ್ಯೂರೊ ನವದೆಹಲಿ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ಜಿಲ್ಲಾಡಳಿತ ಸಭಾಭವನದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಹೊಂದಿಕೆಯಾಗುವ ಆಹಾರ ಸುರಕ್ಷತಾ ಮಾನದಂಡಗಳನ್ನು ನಿರಂತರವಾಗಿ ನವೀಕರಿಸಲು ಹಾಗೂ ಅದಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸಲು ಅಗತ್ಯವಾಗಿರುವ ಮಾಹಿತಿಯನ್ನು ಜನಸಾಮಾನ್ಯರಿಗೆ ಒದಗಿಸುವಲ್ಲಿ ಭಾರತೀಯ ಮಾನಕ ಬ್ಯೂರೊ ಕಾರ್ಯನಿರ್ವಹಿಸಲಿದೆ ಎಂದ ಅವರು,

ಸರ್ಕಾರದಿಂದ ಅನುಷ್ಠಾನಗೊಳ್ಳುವ ಯೋಜನೆಗಳು ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳುವಲ್ಲಿ, ಸರ್ಕಾರದ ಕಾಮಗಾರಿಗಳು, ಗ್ರಾಹಕರು ಖರೀದಿಸುವ ಪ್ರತಿ ವಸ್ತುವಿನ ಗುಣಮಟ್ಟ, ಆರೋಗ್ಯ ಸೇವೆಯ ಗ್ರಾಹಕ ವಸ್ತುಗಳು, ಉತ್ಪನ್ನಗಳು, ಸುರಕ್ಷತಾ ವಸ್ತುಗಳ ಗುಣಮಟ್ಟ, ಉಪಕರಣಗಳ ಪ್ರಮಾಣಿತ ಗುಣಮಟ್ಟ, ಸುಧಾರಣೆ ಮತ್ತು ಇದಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಅಧಿಕಾರಿಗಳು ಅರಿವು ಹೊಂದಿರಬೇಕಾದುದು ತುಂಬಾ ಅಗತ್ಯ ಎಂದರು.


ಮಾರುಕಟ್ಟೆಯಲ್ಲಿ ಗ್ರಾಹಕ ಖರೀದಿಸುವ ಪ್ರತಿ ವಸ್ತುವಿನ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಬೇಕು. ದೋಷಪೂರಿತ ವಸ್ತು, ಉತ್ಪನ್ನಗಳ ವಿರುದ್ಧ ಕಾನೂನು ಹೋರಾಟ ನಡೆಸುವ ಕೌಶಲ ಜ್ಞಾನ ಹೊಂದಿರಬೇಕು. ಅಧಿಕಾರಿಗಳು ತಮ್ಮ ಇಲಾಖೆಯ ಹಲವು ಯೋಜನೆಗಳ ಅನುಷ್ಠಾನದಲ್ಲಿ ಫಲಾನುಭವಿಗಳಿಗೆ ನೀಡಬೇಕಾದ ವಸ್ತುಗಳು, ಸೌಲಭ್ಯಗಳನ್ನು ನೀಡುವಾಗ ಅವುಗಳು ಗುಣಮಟ್ಟದ್ದಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಹಾಗೂ ಖರೀದಿಸುವ ಪ್ರತಿ ವಸ್ತುವೂ ಕೂಡ ಐಎಸ್‌ಐ ಮುದ್ರೆ ಹೊಂದಿದ್ದು ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳಲು ಅವರು ಸೂಚಿಸಿದರು.


ಮಾರುಕಟ್ಟೆಯಲ್ಲಿನ ಅಗ್ಗದ ವಸ್ತುಗಳನ್ನು ಖರೀದಿಸುವುದರಿಂದ ಅದರ ಬಾಳಿಕೆ ಕಡಿಮೆ. ಇದರಿಂದಾಗಿ ಆರ್ಥಿಕ ಹೊರೆ ಮಾತ್ರವಲ್ಲ ದೇಶೀಯ ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸುವ ಕಂಪನಿಯೂ ನಷ್ಟ ಅನುಭವಿಸುತ್ತದೆ. ಇದು ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ಅಡ್ಡ ಪರಿಣಾಮ ಬೀರಲಿದೆ ಎಂದರು.


ತರಬೇತುದಾರರಾಗಿ ಆಗಮಿಸಿದ್ದ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ‍್ಡ್ಸ್‌ನ ವಿಭಾಗೀಯ ಜಂಟಿ ನಿರ್ದೇಶಕ ರಾಕೇಶ್ ತಣ್ಣೀರು ಅವರು ಮಾತನಾಡಿ, ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ದೋಷಪೂರಿತ ಉತ್ಪನ್ನ ಪಡೆದು ವಂಚನೆಗೊಳಗಾದವರು ಗ್ರಾಹಕರ ನ್ಯಾಯಾಲಯದ ಮೂಲಕ ಸೂಕ್ತ ಪರಿಹಾರ ಪಡೆಯಲು ಅವಕಾಶವಿರುವಂತೆಯೇ ಉತ್ಪಾದಕ ಸಂಸ್ಥೆ ಅಥವಾ ಪ್ರತಿನಿಧಿಗೂ ದಂಡ ಹಾಗೂ ಶಿಕ್ಷೆ ನೀಡಲು ಕಾನೂನಿನಲ್ಲಿ ಅವಕಾಶವಿದೆ ಎಂದರು.


ಯಾವುದೇ ಸರಕು, ಉತ್ಪನ್ನವಾಗಲಿ ಅದು ಉತ್ತಮ ಗುಣಮಟ್ಟವನ್ನು ಖಾತ್ರಿಪಡಿಸುವ ಚಿಹ್ನೆ ಇರುವುದು ಕಡ್ಡಾಯ. ಚಿಹ್ನೆ ಇರದ ವಸ್ತುವಿನ ಮಾರಾಟವೂ ಕೂಡ ಗ್ರಾಹಕನಿಗೆ ವಂಚಿಸಿದಂತೆಯೇ ಆಗಲಿದೆ. ಐಎಸ್‌ಐ ನಂತಹ ಚಿಹ್ನೆಗಳ ದುರ್ಬಳಕೆಯೂ ಕೂಡ ಅಕ್ಷಮ್ಯ ಅಪರಾಧವಾಗಲಿದೆ. ಅದಕ್ಕೆ ಶಿಕ್ಷೆ ಮತ್ತು ದಂಡವೂ ಆಗಲಿದೆ ಎಂದರು.


ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ|| ನಾಗೇಂದ್ರ ಎಫ್.ಹೊನ್ನಳ್ಳಿ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!