ಶಿವಮೊಗ್ಗ

ನಗರ ಮತ್ತು ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ರೂಪಿಸಿ ಅನುಷ್ಠಾನಗೊಳಿಸಿದ ಯೋಜನೆಗಳ ಮೂಲಕ ಸಾಲ-ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಸೂಚಿಸಿದರು.


ಅವರು ಇಂದು ನಗರದ ಮಾರ್ಗದರ್ಶಿ ಬ್ಯಾಂಕು ದೇಶದ ಅಮೃತ ಮಹೋತ್ಸವದ ಅಂಗವಾಗಿ ಸೆಕ್ರೇಡ್ ಹಾರ್ಟ್ ಚರ್ಚ್‌ನ ಸ್ನೇಹಸದನ ಭವನದಲ್ಲಿ ಏರ್ಪಡಿಸಲಾಗಿದ್ದ ಸಾಲ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗ್ರಾಮೀಣ ರೈತರು ಹಾಗೂ ಜನಸಾಮಾನ್ಯರು ಬ್ಯಾಂಕುಗಳತ್ತ ಧಾವಿಸಿ, ಆರ್ಥಿಕವಾಗಿ ತಮ್ಮ ಬದುಕನ್ನು ಹಸನು ಮಾಡಿಕೊಳ್ಳುವಲ್ಲಿ ಬ್ಯಾಂಕುಗಳು ನೀಡಿದ ಸಹಕಾರ ಅಸಾಧಾರಣವಾದುದ್ದು. ಮುಂದಿನ ದಿನಗಳಲ್ಲಿಯೂ ಬ್ಯಾಂಕುಗಳಿಗೆ ಆರ್ಥಿಕ ಸಾಲಸೌಲಭ್ಯನ್ನು ಅರಸಿ ಬರುವ ಗ್ರಾಹಕರಿಗೆ ಉತ್ತಮ ಸಹಕಾರ ನೀಡುವಂತೆ ಅವರು ಸೂಚಿಸಿದರು.


ಇದೇ ಸಂದರ್ಭದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಗ್ರಾಮೀಣ ಜನರಿಗೆ ದೊರೆಯಬಹುದಾದ ಸಾಲಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಪ್ರೋತ್ಸಾಹಿಸುತ್ತಿರುವುದು ಸ್ವಾಗತಾರ್ಹವಾಗಿದ್ದು, ಜನರು ಯೋಜನೆಗಳ ಲಾಭವನ್ನು ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.
ಜಿಲ್ಲೆಯ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿ ಅನುಷ್ಠಾನಗೊಳಿಸುವ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ವಿಶೇಷ ಗಮನಹರಿಸಬೇಕೆಂದ ಅವರು, ಬ್ಯಾಂಕು ಸಿಬ್ಬಂಧಿಗಳು ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸಬೇಕೆಂದವರು ನುಡಿದರು.


ವಿಶೇಷವಾಗಿ ಪ್ರಧಾನಮಂತ್ರಿ ಸುರಕ್ಷಾ ಯೋಜನೆಗಳು ಉಪಯುಕ್ತವಾಗಿದ್ದು, ಜನಪರ ಮನ್ನಣೆ ಪಡೆದಿವೆ. ಈ ಯೋಜನೆಗಳಲ್ಲಿ ಅರ್ಹರಾದ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸುವಂತೆ ಸೂಚಿಸಿದ ಅವರು, ಅರ್ಹ ಫಲಾನುಭವಿಗಳು ತಮ್ಮ ಹಣಕಾಸಿನ ಅಗತ್ಯಗಳಿಗೆ ಬ್ಯಾಂಕುಗಳಿಗೆ ತೆರಳಿ ತಮಗೆ ಅಗತ್ಯ ಸೌಲಭ್ಯ ಪಡೆಯುವ ಮೂಲಕ ಬ್ಯಾಂಕುಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕೆಂದವರು ನುಡಿದರು.


ಈ ಸಮಾರಂಭದಲ್ಲಿ ಜಿಲ್ಲೆಯ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳು ಸೇರಿದಂತೆ ಸುಮಾರು 22 ಬ್ಯಾಂಕುಗಳ ವ್ಯವಸ್ಥಾಪಕರು, ಸಿಬ್ಬಂಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಗ್ರಾಮೀಣ ಜನತೆ ಮತ್ತು ಗ್ರಾಹಕರೊಂದಿಗೆ ಸಂಪರ್ಕ ಸಾಧಿಸುವ ೦೩ಜನ ಬ್ಯಾಂಕ್ ಮಿತ್ರರನ್ನು ಹಾಗೂ ಬ್ಯಾಂಕುಗಳ ಸಾಧಕ ಗ್ರಾಹಕರನ್ನು, ಕೇಂದ್ರ ಪುರಸ್ಕೃತ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಉತ್ತಮ ಸಾಧನೆ ಮಾಡಿದ ಬ್ಯಾಂಕುಗಳು/ಶಾಖೆಗಳ ವ್ಯವಸ್ಥಾಪಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ವಿಭಾಗೀಯ ವ್ಯವಸ್ಥಾಪಕ ಸಂದಿಪ್‌ರಾವ್ ಪಿ. ಅವರು ಮಾತನಾಡಿದರು. ನಬಾರ್ಡ್ ಬ್ಯಾಂಕ್‌ನ ಬಿ.ರವಿ, ಎಸ್.ಬಿ.ಐ.ನ ಶ್ರೀಜಿತ್, ಕರ್ನಾಟಕ ಬ್ಯಾಂಕಿನ ಹಯವದನ ಉಪಾಧ್ಯಾಯ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಕನಕಾಲ್, ತಿಮ್ಮನಾಯಕ, ಗಣೇಶ್,LEAD BANK ಮುಖ್ಯಸ್ಥ ಯತೀಶ್ ಮುಂತಾದವರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!