ಶಿವಮೊಗ್ಗ,
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಕೇಂದ್ರ ಸರ್ಕಾರದ ಪಿಎಂ ಕೇರ್ಸ್ ಯೋಜನೆಯಿಂದ ನೆರವು ನೀಡಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರ ಸಮಗ್ರ ಮಕ್ಕಳ ರಕ್ಷಣಾ ಯೋಜನೆ, ಶಿವಮೊಗ್ಗ ಜಿಲ್ಲಾ ಮಕ್ಕಳ ರಕ್ಷಣಾ ಕಛೇರಿ, ಪಿಎಂ ಕೇರ್ಸ್ ಕೇಂದ್ರ ಸರ್ಕಾರದ ಯೋಜನೆಯಡಿ ಮಗುವಿಗೆ ದೊರಕುವ ಸೌಲಭ್ಯಗಳ ಕಿಟ್ ಮತ್ತು ಪಿಎಂ ಕೇರ್ಸ್ ಬಾಂಡ್ ವಿತರಿಸಿ ಅವರು ಮಾತನಾಡಿದರು.
ಕೋವಿಡ್-೧೯ ಕಾರಣದಿಂದ ಪೋಷಕರಿಬ್ಬರನ್ನು ಕಳೆದುಕೊಂಡಿರುವ ೧೮ ವರ್ಷದ ಒಳಗಿನ ಮಕ್ಕಳು ಈ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುತ್ತಾರೆ. ಕೇಂದ್ರ ಸರ್ಕಾರದ ಮಾರ್ಗ ಸೂಚಿಯನ್ವಯ ಮಕ್ಕಳ ಹೆಸರಲ್ಲಿ ಅಂಚೆ ಕಛೇರಿಯಲ್ಲಿ ಠೇವಣಿ ಇಡಲಾಗುವುದು ಎಂದರು.
ಪಿಎಂ ಕೇರ್ಸ್ ಯೋಜನೆಯಡಿ ಆಯ್ಕೆಯಾದ ಮಕ್ಕಳಿಗೆ ಆರೋಗ್ಯ ವಿಮೆ ಸೌಲಭ್ಯ ಕೂಡ ನೀಡಲಾಗುತ್ತದೆ. ಅವರ ಶಿಕ್ಷಣ, ಪಾಲನೆಗಾಗಿ ಈ ಯೋಜನೆ ರೂಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಅಶೋಕ್ ನಾಯ್ಕ್, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ, ಜಿಲ್ಲಾ ಉಪ ನಿರ್ದೇಶಕರು ಸುರೇಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.