ಶಿವಮೊಗ್ಗ, ಮೇ.23:
ರಾಜ್ಯದಲ್ಲಿ ಒಂದು ವೇಳೆ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಪಿಎಸ್‌ಐ ನೇಮಕಾತಿ ಅಕ್ರಮ ವಿಚಾರ ಹೊರಗಡೆಯೇ ಬರುತ್ತಿರಲಿಲ್ಲ. ಅದನ್ನು ಮುಚ್ಚಿ ಹಾಕುತ್ತಿದ್ದರು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಬಿಜೆಪಿ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ.
ಹೀಗಾಗಿಯೇ ಪ್ರಕರಣದ ಬಗ್ಗೆ ಪಾರದರ್ಶಕವಾಗಿ ತನಿಖೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಯಾವ ಇಲಾ ಖೆಯ ಅಭಿವೃದ್ಧಿ ಕಾರ್ಯಗಳೂ ನಿಂತಿಲ್ಲ’ ಎಂದರು.
ಪ್ರತಿಪಕ್ಷಗಳಿಂದ ಗೊಂದಲ ಸೃಷ್ಟಿ: ಪಠ್ಯಪುಸ್ತಕದಲ್ಲಿ ಭಗತ್ ಸಿಂಗ್, ’ನಾರಾಯಣಗುರು ಹೆಸರು ತೆಗೆದು ಹಾಕಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಇದು ಸುಳ್ಳು. ಯಾವ ಕಾರಣಕ್ಕೂ ನಾರಾಯಣ ಗುರು, ಭಗತ್ ಸಿಂಗ್ ಹೆಸರು ಪಠ್ಯದಿಂದ ತೆಗೆಯುವುದಿಲ್ಲ. ಹೆಡಗೇವಾರ್ ಅವರ ರಾಷ್ಟ್ರಭಕ್ತಿ ವಿಚಾರವನ್ನು ಕೂಡ ಪಠ್ಯದಲ್ಲಿ ಹಾಕಲಾಗುತ್ತಿದೆ’ ಎಂದರು.
’ವಸ್ತ್ರಸಂಹಿತೆಯ ಬಗ್ಗೆ ಮಾತನಾಡುವ ಧಾವಂತದಲ್ಲಿ ಪ್ರಿಯಾಂಕಾ ಗಾಂಧಿ ಅವರು ’ಬಿಕನಿ ಬೇಕಾದರೂ ಹಾಕಿಕೊಳ್ಳಲಿ’ ಎಂದಿದ್ದರು. ಅವರಿಗೆ ಎಲ್‌ಕೆಜಿ ಮಕ್ಕಳು ಹೋಗಿ ಪಾಠ ಹೇಳಿ ಕೊಡಬೇಕಿದೆ. ಯಾರಾದರೂ ಶಾಲೆಗಳಿಗೆ ಅಂತಹ ಬಟ್ಟೆಗಳನ್ನು ಧರಿಸಿ ಬರುತ್ತಾರೆಯೇ’ ಎಂದು ಪ್ರಶ್ನಿಸಿದರು.
’ಕೋರ್ಟ್ ಆದೇಶವಿದ್ದರೂ ದತ್ತಪೀಠದಲ್ಲಿ ಮಾಂಸಾಹಾರ ಸೇವಿಸುತ್ತಿದ್ದು, ಅವರಿಗೆಷ್ಟು ಸೊಕ್ಕು ಇರಬೇಕು. ಅನ್ಯ ಕೋಮಿನವರು ಏನೇ ತಪ್ಪುಗಳನ್ನು ಮಾಡಿದರೂ ಅದಕ್ಕೆ ಚಕಾರ ಎತ್ತುವುದಿಲ್ಲ. ಕೋರ್ಟ್ ಆದೇಶಕ್ಕೆ ಬೆಲೆ ಕೊಡದವರಿಗೆ ಬೆಂಬಲವಾಗಿ ಕಾಂಗ್ರೆಸ್ ನಿಲ್ಲುತ್ತಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರೇ ರಾಜ್ಯದಲ್ಲಿ ರಾಷ್ಟ್ರದ್ರೋಹಿಗಳು’ ಎಂದು ವಾಗ್ದಾಳಿ ನಡೆಸಿದರು.