ಶಿವಮೊಗ್ಗ,
ಕಳೆದ ೫೦ ವರ್ಷಗಳಿಂದ ರೈತ ಹೋರಾಟದಲ್ಲಿ ತನ್ನದೇ ಆದ ವಿಶಿಷ್ಟ ಪಾತ್ರ ವಹಿಸಿರುವ ರೈತ ನಾಯಕ ಹೆಚ್.ಆರ್. ಬಸವರಾಜಪ್ಪ ಅವರ 5 ದಶಕಗಳ ರೈತ ಹೋರಾಟದ ಕುರಿತ ‘ಹಸಿರು ಹಾದಿಯ ಕಥನ’ ಪುಸ್ತಕ ಬಿಡುಗಡೆ ಮತ್ತು ಸಾಕ್ಷ್ಯ ಚಿತ್ರ ಬಿಡುಗಡೆ ಕಾರ್ಯಕ್ರಮ ಮೇ ೨೫ ರಂದು ಕುವೆಂಪು ರಂಗಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಪುಸ್ತಕ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಹೆಚ್.ಆರ್. ಬಸವರಾಜಪ್ಪ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯದ ನಂತರ ಕರ್ನಾಟಕ ರಾಜ್ಯದಲ್ಲಿ ಸಾಗಿ ಬಂದ ಹೋರಾಟದ ಇಡೀ ಚಿತ್ರಣವನ್ನು ಶಿವಮೊಗ್ಗ ಜಿಲ್ಲೆಯ ಕೇಂದ್ರವಾಗಿಟ್ಟು ಕೊಂಡು ಈ ಪುಸ್ತಕವನ್ನು ಬರೆದಿದ್ದೇನೆ. ಇಲ್ಲಿ ಯಾವುದೇ ಅತಿರೇಕವಾಗಲೀ ಅಥವಾ ಮುಚ್ಚುಮರೆಯಾಗಲೀ ಇಲ್ಲ. ನನ್ನ ಅಭಿಪ್ರಾಯಗಳನ್ನು ಒಂದೆಡೆ ಕಲೆಹಾಕಿ ಇದನ್ನು ಪುಸ್ತಕ ರೂಪದಲ್ಲಿ ಹೊರತರಲಾಗುತ್ತಿದೆ. ಗಿರೀಶ್ ತಾಳಿಕಟ್ಟೆ ಇದರ ಜವಾಬ್ದಾರಿ ಹೊತ್ತಿದ್ದಾರೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ರೈತ ಸಂಘದ ಜೊತೆ ಜೊತೆಯಾಗಿಯೇ ಕಾಗೋಡು ಚಳವಳಿ, ದಲಿತ ಚಳವಳಿ ಸೇರಿದಂತೆ ಅನೇಕ ಹೋರಾಟಗಳು ನಡೆದಿವೆ. ಇದನ್ನು ಕೂಡ ಪೂರಕವಾಗಿ ಮತ್ತು ಸಾಂದರ್ಭಿಕವಾಗಿ ಪುಸ್ತಕದ ಜೊತೆ ಜೊತೆಗೇ ಸಾಗುತ್ತವೆ. ಇಲ್ಲಿ ಯಾವುದನ್ನೂ ಮರೆಮಾಚಿಲ್ಲ. ರೈತಸಂಘದಲ್ಲಿ ತಪ್ಪಿದ ಹೆಜ್ಜೆಗಳ ಗುರುತು ಇಬ್ಬಾಗವಾಗಿದ್ದು, ವಿಚಾರದ ಭಿನ್ನಾಭಿಪ್ರಾಯಗಳು ರಾಜಕೀಯದ ವಿಷಯಗಳು ಎಲ್ಲವೂ ಇವೆ. ನನ್ನ ತಪ್ಪು, ಒಪ್ಪುಗಳನ್ನು ಯಾವುದೇ ಮುಚ್ಚು ಮರೆ ಇಲ್ಲದೇ ಸುಮಾರು 240 ಪುಟದ ಈ ಪುಸ್ತಕದಲ್ಲಿ ಕಾಣಿಸಿದ್ದೇನೆ ಎಂದರು.
ಕರ್ನಾಟಕ ಜನಶಕ್ತಿ ಕೆ.ಎಲ್. ಅಶೋಕ್ ಮಾತನಾಡಿ, ಹಸಿರು ಹಾದಿಯ ಕಥನ ರೈತ ಸಂಘದ ಏಳು ಬೀಳುಗಳನ್ನು ದಾಖಲಿಸಿದೆ. ಈ ಪುಸ್ತಕಕ್ಕೆ ಒಂದು ಸಾವಯವ ಗುಣವಿದೆ. ಕರ್ನಾಟಕದ ರೈತ ಹೋರಾಟದ ಗುಣಧರ್ಮವೂ ಸೇರಿಕೊಂಡು ಕೇವಲ ಜೀವನ ಚರಿತ್ರೆಯಾಗದೇ ರೈತರ ಜೀವವಾಗಿದೆ. ಪ್ರಭುತ್ವದ ನಿಷ್ಠುರತೆಯನ್ನು ಮೀರಿ ಈ ಪುಸ್ತಕ ಹೊರ ಬರುತ್ತಿದೆ. ಬಸವರಾಜಪ್ಪ ಅವರು ಎಲ್ಲಿಯೂ ಎಂದಿಗೂ ರಾಜಿಯಾಗಲಿಲ್ಲ. ಅವರ ಹೋರಾಟಗಳು ದಾಖಲೆಯಾ ಗಿವೆ. ಈಗ ಈ ಪುಸ್ತಕ ಒಂದು ಮೈಲುಗಲ್ಲಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಹೆಚ್. ಹಾಲೇಶಪ್ಪ, ಮಂಜಪ್ಪ, ರಾಘವೇಂದ್ರ, ರುದ್ರೇಶ್, ಚನ್ನಪ್ಪಗೌಡ ಇದ್ದರು.