ಬೆಂಗಳೂರು: ರಾಜ್ಯದಲ್ಲಿ ಮೇ 16 ರಿಂದ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಈ ನಿರ್ಧಾರಕ್ಕೆ ಕೈಬಿಟ್ಟು ಮೇ 30 ರವರೆಗೆ ಬೇಸಿಗೆ ರಜೆ ವಿಸ್ತರಿಸಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮನವಿ ಮಾಡಿದ್ದಾರೆ. ಹಾಗೂ ವಿಧಾನಪರಿಷತ್ ಸದಸ್ಯ ಚಿದಾನಂದ ಗೌಡ ಅವರು ಕೂಡ ರಜೆಯನ್ನು ಮೇ 30 ರವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಕುರಿತಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಪತ್ರ ಬರೆದಿದ್ದು, 15 ದಿನ ಮೊದಲೇ ಶಾಲೆ ಆರಂಭಿಸಲು ಮುಂದಾಗಿರುವುದರಿಂದ ದೂರದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ವರ್ಷಕ್ಕೊಮ್ಮೆ ನೀಡುವ ಕನಿಷ್ಠ ರಜೆ, ಬೇಸಿಗೆ ರಜೆ ಅವಧಿಯಲ್ಲಿ ಕುಟುಂಬದೊಂದಿಗೆ ಕಾಲ ಕಳೆಯಲು ಸಾಧ್ಯವಾಗುವುದಿಲ್ಲ. ಈ ಬಾರಿ ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗಿರುವುದರಿಂದ ಬೇಸಿಗೆ ರಜೆಯನ್ನು ವಿಸ್ತರಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘ ಮೇ 30ರವರೆಗೆ ರಜೆ ವಿಸ್ತರಿಸಬೇಕೆಂದು ಪತ್ರ ಬರೆದಿರುವುದಕ್ಕೆ ರಾಜ್ಯ ಖಾಸಗಿ ಶಾಲಾ ಕಾಲೇಜು ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆ, ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆಡಳಿತ ಮಂಡಳಿಗಳ ಸಂಘ, ನೋಂದಾಯಿತ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘದಿಂದ ವಿರೋಧ ವ್ಯಕ್ತವಾಗಿದೆ. ನಿಗದಿಯಂತೆ ಶಾಲೆ ಆರಂಭಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

By admin

ನಿಮ್ಮದೊಂದು ಉತ್ತರ

error: Content is protected !!