ಸೂರು ಸಿಕ್ಕ ಜನರ ಸೌಭಾಗ್ಯವನ್ನು ಶಾಸಕ ಆಯನೂರು ಮಂಜುನಾಥ್ ವರ್ಣಿಸಿದ್ದು ಹೀಗಿತ್ತು..

Tungataranga | April,07,2022 | Shimoga News

ಶಿವಮೊಗ್ಗ ನಗರದ ಸರ್ಕಾರಿ ಭೂಮಿಯಲ್ಲಿರುವ ೨೬೨೪ ಹಾಗೂ ನಗರ ಪಾಲಿಕೆ ಜಾಗದಲ್ಲಿರುವ 225 ಅಕ್ರಮ ಮನೆಗಳನ್ನು ಸಕ್ರಮಗೊಳಿಸುವ ಸದುದ್ದೇಶದ ಕಾರ್ಯಕ್ರಮವಾದ ಒಟ್ಟು 2624 ಮನೆಗಳಿಗೆ ಹಕ್ಕು ಪತ್ರ ನೀಡುವ ಕಾಯಕಕ್ಕೆ ಇಂದಿನಿಂದ ಚಾಲನೆ ದೊರೆತಿದ್ದು, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿದರು. ವಿಧಾನಪರಿತ್ ಶಾಸಕ ಆಯನೂರು ಮಂಜುನಾಥ್ ಅವರು ಹಕ್ಕು ಪತ್ರ ವಿತರಿಸುವ ಮೂಲಕ ಚಾಲನೆ ನೀಡಿದರು.

ಶಿವಮೊಗ್ಗ ಕುಂಬಾರ ಗುಂಡಿಯಲ್ಲಿ ಆಯೋಜಿಸಿದ್ದ ಹಕ್ಕುಪತ್ರ ವಿತರಣೆಯ ಈ ಕಾರ್ಯಕ್ರಮದಲ್ಲಿ ಶಾಸಕ ಆಯನೂರು ಮಂಜುನಾಥ್ ಮಾತನಾಡುತ್ತಾ, ಬಡವರ ಬದುಕಿನಲ್ಲಿ ಅವರ ತೋಳುಗಳೇ ಆಸರೆ, ತೋಳು ಗಟ್ಟಿಯಾಗಿದ್ದರೆ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯ. ಹೊಟ್ಟೆಗೆ ಅನ್ನ, ನೆಮ್ಮದಿಯ ನಿದ್ದೆ ಮಾಡಲು ಮನೆಯೊಂದಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದೆಂದರು.
ಇಂದು ಕುಂಬಾರ ಗುಂಡಿ, ಸವಾರ್ ಲೈನ್ ರಸ್ತೆ ಸೇರಿದಂತೆ ಒಟ್ಟು 193 ಅಕ್ರಮ ಮನೆಗಳಲ್ಲಿದ್ದವರಿಗೆ ಸಕ್ರಮಗೊಳಿಸುವ ಹಕ್ಕುಪತ್ರವನ್ನು ವಿತರಿಸಲಾಗಿದೆ. ರಾಜ್ಯ ಸರ್ಕಾರ, ಸ್ಥಳಿಯ ನಗರ ಪಾಲಿಕೆ, ಆಶ್ರಯ ಸಮಿತಿ ವಿಶೇಷವಾಗಿ ಕೊಳಚೆ ನಿರ್ಮೂಲನಾ ಮಂಡಳಿ ಇಂತಹ ಹಕ್ಕು ಪತ್ರವನ್ನು ಕೊಡಿಸುವ ಕಾಯಕಕ್ಕೆ ಮುಂದಾಗಿರುವುದು ಈ ಕುಟುಂಬಗಳ ಬದುಕನ್ನು ಹಸಿರಾಗಿಸಿದೇ ಎಂದರು.
ಪಕ್ಷಿಗಳೇ ಬದುಕಲು ಗೂಡು ಕಟ್ಟಿಕೊಳ್ಳುತ್ತಾರೆ. ಹಾಗೆಯೇ ನಮಗೆ ಒಂದು ಮನೆಬೇಕು. ಈಗ ನಿಮಗೆ ಅಧಿಕೃತವಾಗಿ ಸಿಕ್ಕಿರುವ ಮನೆಯನ್ನು ಮಾರಿಕೊಳ್ಳದೀರಿ. ನೆಮ್ಮದಿಯ ಬದುಕು ನಿಮ್ಮದಾಗಲಿ ಎಂದರು.
ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿ ಮಂಜುನಾಥ್ ಅವರು ಒಟ್ಟು ಶಿವಮೊಗ್ಗ ನಗರದಲ್ಲಿ 2624 ಸರ್ಕಾರಿ ಹಾಗೂ ಪಾಲಿಕೆ ಜಾಗದಲ್ಲಿನ ಅಕ್ರಮ ಮನೆಗಳನ್ನು ಸಕ್ರಮಗೊಳಿಸಲು ಹಕ್ಕುಪತ್ರ ನೀಡಲಾಗಿದೆ ಎಂದರು.
ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಅವರು ಮಾತನಾಡುತ್ತಾ, ಇಂತಹ ಅಕ್ರಮ ಮನೆಗಳನ್ನು ಗುರುತಿಸಿ ಸಕ್ರಮಗೊಳಿಸುವ ಬಹು ಹಿಂದಿನಿಂದಲೂ ಕಾಡುತ್ತಿದ್ದ ಸಮಸ್ಯೆಯಾಗುತ್ತಿತ್ತು, ಇಂದಿನ ಈ ದಿನಮಾನಗಳಲ್ಲಿ ಅವರಿಗೆ ಹಕ್ಕುಪತ್ರ ನೀಡುತ್ತಿರುವುದು ಸಂತಸದ ವಿಚಾರ ಎಂದರು.
ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್,ಕೊಳಚೆ ನಿರ್ಮೂಲನಾ ಮಂಡಳಿ ಗೀತಾ ರವೀಂದ್ರ, ಪಾಲಿಕೆ ಉಪಮೇಯರ್ ಗನ್ನಿ ಶಂಕರ್ ಹಾಗೂ ಇತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!