ನರಕಯಾತನೆಗೊಳಗಿರುವ ಕ್ರಶರ್ ಮಾಲೀಕರನ್ನು ಬದುಕಿಸಿ
ಶಿವಮೊಗ್ಗ ಹೊರವಲಯದ ಕ್ರಶರ್, ಕೋರೆಗಳ ಪುನಾರಾರಂಭಕ್ಕೆ ಅಗ್ರಹ

ಶಿವಮೊಗ್ಗ, ಏ.04:
ಶಿವಮೊಗ್ಗ ಜಿಲ್ಲೆಯಲ್ಲಿ ಜೆಲ್ಲಿ ಕಲ್ಲುಗಳಿಗಾಗಿ ಅನ್ಯ ಜಿಲ್ಲೆಗಳನ್ನು ಹುಡುಕುವ ಪರಿಸ್ಥಿತಿ ಬಂದೋದಗಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಹುಣಸೋಡು ಸ್ಫೋಟದ ನಂತರ ಅಧಿಕೃತತೆ ಇದ್ದರೂ ಸಹ ನಡೆಸಲಾದ ಸುಮಾರು 65 ಕ್ರಶರ್‌ಗಳು ಬಾಗಿಲು ಹಾಕಿಕೊಂಡಿದ್ದು, ಅವುಗಳನ್ನು ನಿಭಾಯಿಸುವುದರಲ್ಲಿ ಸೋತು ಸುಣ್ಣವಾಗಿದ್ದಾರೆ.


ಹೀಗೆ ಮುಂದುವರೆದರೆ, ಈ ಕ್ರಶರ್‌ಗಳ ಮಾಲೀಕರು ವಿದ್ಯುತ್ ಬಿಲ್ ಕಟ್ಟಲಾಗದೆ, ಇರುವ ಕೆಲಸಗಾರರ ವೇತನ ಕೊಡಲಾಗದೇ, ಕ್ರಶರ್‌ಗಾಗಿ ಮಾಡಿದ ಲಕ್ಷಾಂತರ ರೂಪಾಯಿ ಸಾಲಕ್ಕೆ ಕನಿಷ್ಠ ಬಡ್ಡಿ ಕಟ್ಟಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವು ಅನಿವಾರ್ಯತೆ ಬಂದೊದಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಸ್ಫೋಟದ ನಂತರ ಅಧಿಕೃತ ಪರವಾನಿಗೆ ಇದ್ದರೂ ಸಹ ನಡೆಸಲಾಗದ ಸುಮಾರು 65 ಕ್ರಶರ್‌ಗಳ ಬಹುತೇಕ ಮಾಲೀಕರು ಸಂಪೂರ್ಣವಾಗಿ ಸೋತು ಹೋಗಿದ್ದಾರೆ. ಅಂದಿನಿಂದ ಇಂದಿನವರೆಗೆ ತಾವು ಮಾಡಿಕೊಂಡಿರುವ ಲಕ್ಷಾಂತರ ರೂ.ಮೌಲ್ಯದ ಕ್ರಶರ್ ಉಳಿಸಿಕೊಳ್ಳಲು ಪಡೆದಿರುವ 500 ಕೆವಿ ವಿದ್ಯುತ್ ಬಿಲ್ ಕನಿಷ್ಠ ದರ 1,05,200 ರೂಪಾಯಿ ಹಣವನ್ನು ಪ್ರತಿ ತಿಂಗಳು ಪಾವತಿಸಬೇಕಾಗಿದೆ. ಜೊತೆಗೆ ಕನಿಷ್ಠ 30 ಸಾವಿರದಂತೆ ಬಂದಿರುವ ಬ್ರೇಕರ್, ಹಿಟಾಚಿ ಜೆಸಿಬಿ ಕೆಲಸಗಾರರು, ಕ್ರಶರ್ ಅಪರೇಟರ್‌ಗಳು ಸಹಾಯಕರು ಸೇರಿದಂತೆ ಇರುವ ಕನಿಷ್ಠ 30 ಜನರ ವೇತನ ನಿಭಾಯಿಸುವುದಾದರೂ 4 ರಿಂದ 5 ಲಕ್ಷ ರೂಪಾಯಿ ಪ್ರತಿ ಮಾಸಿಕ ನೀಡಬೇಕಾಗಿದೆ.
ವಿದ್ಯುತ್ ದರ ಪಾವತಿಸದೇ ಅನುಮತಿ ಕಳೆದುಕೊಂಡರೆ ನಂತರ ವಿದ್ಯುತ್ ಪಡೆಯುವುದು ಅತ್ಯಂತ ಕಷ್ಟಸಾಧ್ಯ. ಒಮ್ಮೆ ಕೆಲಸಗಾರರನ್ನು ಊರಿಗೆ ಕಳುಹಿಸಿದರೆ ಮತ್ತೆ ಅವರು ವಾಪಾಸ್ ಬರುತ್ತಾರೆಂಬ ಯಾವ ನಂಬಿಕೆಗಳು ಇಲ್ಲದಿರುವುದರಿಂದ ಅವರನ್ನು ಕಳೆದುಕೊಳ್ಳಲಿಚ್ಛಿದೇ ಪ್ರತಿ ತಿಂಗಳು ಕನಿಷ್ಠ 6 ರಿಂದ 7 ಲಕ್ಷ ರೂಪಾಯಿ ಹಣ ಪಾವತಿಸುವ ಅನಿವಾರ್ಯತೆಯೊಳಗೆ ಒಂದೂವರೆ ವರ್ಷ ಸೊರಗಿದ್ದಾರೆ.


ಶಿವಮೊಗ್ಗ ಸರಹದ್ದಿನ ಗೆಜ್ಜೇನಹಳ್ಳಿ, ಬಸವನಗಂಗೂರು, ಕಲ್ಲುಗಂಗೂರು, ದೇವಕಾತಿಕೊಪ್ಪ ಮೊದಲಾದ ಹಲವು ಹಳ್ಳಿಗಳಲ್ಲಿ ಇರುವ ಈ 65 ಕ್ಕೂ ಹೆಚ್ಚು ಕ್ರಶರ್‌ಗಳು 18 ತಿಂಗಳಿನಿಂದ ಸಂಪೂರ್ಣ ಸ್ಥಗಿತಗೊಂಡಿವೆ. ಈಗಲೂ ನಿತ್ಯದ ನಿಭಾಯಿಸುವಿಕೆ, ಲಕ್ಷಾಂತರ ರೂ ಮೌಲ್ಯದ ಕ್ರಶರ್‌ಗಳನ್ನು ಉಳಿಸಿಕೊಳ್ಳುವ ತವಕದಲ್ಲಿ ಸಾಲದ ಮೇಲೆ ಸಾಲ ಮಾಡುತ್ತಾ, ಅತಂತ್ರ ಪರಿಸ್ಥಿತಿ ಅನುಭವಿಸುತ್ತಿದ್ದಾರೆ.
ಬಹುತೇಕ. ಕ್ರಶರ್ ಮಾಲಿಕರು ತಮ್ಮ ಸ್ವತ್ತನ್ನು ಉಳಿಸಿಕೊಳ್ಳಲಾಗದೇ, ನಿತ್ಯ ಸಾಲ ಹುಡುಕುವ ಪರಿಸ್ಥಿತಿಗೆ ಬಂದಿರುವುದು ಒಂದು ಕಡೆಯಾದರೆ, ಬಹಳಷ್ಟು ಜನ ಕ್ರಶರ್ ಅನುಮತಿ ಸಿಕ್ಕರೆ ಬಂದಷ್ಟೇ ಹಣಕ್ಕೆ ಕೊಟ್ಟು ಕೈ ತೊಳೆದುಕೊಳ್ಳಲು ಸಜ್ಜಾಗಿದ್ದಾರೆನ್ನಲಾಗಿದೆ.
ಇದರ ನಡುವೆ ನಿಂತ ಕ್ರಶರ್ ಗಳಲ್ಲಿ ಕಳ್ಳತನ ಹೆಚ್ಚಾಗಿದೆ. ಅಲ್ಲಿರುವ ಗುಜರಿ ಐಟಂಗಳನ್ನು ಈಗಾಗಲೇ ಕದ್ದಿರುವ ಕಳ್ಳರು ಲಕ್ಷಾಂತರ ಬೆಲೆಬಾಳುವ ಯಂತ್ರಗಳನ್ನು, ಇಟಾಚಿಗಳನ್ನು ಕದಿಯುವ ಮುನ್ನ ನ್ಯಾಯ ಕೊಡಬೇಕಿದೆ ಎಂಬುದು ಕ್ರಶರ್ ನವರ ಅಳಲು.
ಈಗಲೂ ಕಂದಾಯ, ಸರ್ಕಾರಿ ತೆರಿಗೆ ಪಾವತಿ ಸೇರಿದದಂತೆ ಎಲ್ಲವನ್ನು ಅತ್ಯಂತ ಸೂಕ್ತವಾಗಿ ನಿಭಾಯಿಸುತ್ತಿರುವ ಈ ಕ್ರಶರ್‌ಗಳಿಗೆ ಅನುಮತಿ ನೀಡಲು ಸಹಕರಿಸಿದರೆ ಒಳ್ಳೆಯದವಲ್ಲವೆ.? ಜಿಲ್ಲೆಯ ಜನರಿಗೂ ಅತ್ಯಂತ ಕಡಿಮೆ ದರದಲ್ಲಿ ಜೆಲ್ಲಿ, ಎಂಸ್ಯಾಂಡ್ ದೊರೆಯುತ್ತದೆ ಅಲ್ಲವೇ..? ಒಂದೂವರೆ ವರ್ಷಗಳ ಕಾಲ ನಿಂತುಕೊಂಡಿರುವ ಈ ಕ್ರಶರ್‌ಗಳ ಹಾಗೂ ರಾಯಲ್ಟಿ ಲೀಜ್ ಮುಂದುವರೆಸಿಕೊಳ್ಳಬೇಕಾದ ಕೋರೆಗಳ ಅವಧಿಯನ್ನು ಸಮರ್ಪಕವಾಗಿ ನೀಡಿದರೆ ಕಲ್ಲುಗಣಿಗಾರಿಕೆಯ ಮೂಲಕ ನೂರಾರು ಕುಟುಂಬಗಳಿಗೆ ಬದುಕು ದೊರೆಯುತ್ತದೆ.


ಜೆಲ್ಲಿ ಕಲ್ಲು ದರ ದುಪ್ಪಟ್ಟು
ಹಿಂದೆ ಇದೇ ಶಿವಮೊಗ್ಗ ಸುತ್ತಮುತ್ತಲಿನ ಕ್ರಶರ್‌ಗಳು ಕೆಲಸ ಮಾಡುತ್ತಿದ್ದಾಗ 25 ರೂಪಾಯಿಗೆ ಒಂದು ಘನ ಚದುರಡಿ ಸಿಗುತ್ತಿದ್ದ ಜೆಲ್ಲಿ ಕಲ್ಲಿನ ಬೆಲೆ ಈಗ 60 ರೂಪಾಯಿ ದಾಟಿದೆ. ಶಿವಮೊಗ್ಗ ಭಾಗದ ಜನತೆ ದಾವಣಗೆರೆ ಬೆಂಗಳೂರು, ದುರ್ಗಾ ಕಡೆಯಿಂದ ಜೆಲ್ಲಿಕಲ್ಲು ತರಿಸಬೇಕಾಗಿದೆ.
ಗ್ರಾಹಕರ ಅನಿವಾರ್ಯತೆ ಹಾಗೂ ಹೊರೆ ತಪ್ಪಿಸಲು ಸ್ಥಳೀಯ ಕ್ರಶರ್‌ಗಳಿಗೆ ಹಾಗೂ ಕೊರೆಗಳಿಗೆ ಇರುವ ಅನುಮತಿಯನ್ನು ಮುಂದುವರೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನ ಪ್ರಯತ್ನಗಳು ನಡೆಯಲಿ. ನಮ್ಮೂರು ನಮ್ಮ ಜನರ ಕಟ್ಟಡ ಕಾಮಗಾರಿಗಳು ಸಸೂತ್ರವಾಗಲಿ ಎಂಬುದು ಒತ್ತಾಯ
-ಶಿವಮೊಗ್ಗ ಸಾರ್ವಜನಿಕರು

By admin

ನಿಮ್ಮದೊಂದು ಉತ್ತರ

error: Content is protected !!