ಏಪ್ರಿಲ್ 05 ಬಾಬು ಜಗಜೀವನ್ ರಾಮ್ ಜಯಂತಿ ಪ್ರಯುಕ್ತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ
ಶಂಕರಘಟ್ಟ, ಏ. 04:
ಬರುವ ಏಪ್ರಿಲ್ 05ರ ನಾಳೆ ಬಾಬು ಜಗಜೀವನ್ ರಾಮ್ ಜಯಂತಿ ಪ್ರಯುಕ್ತ ಕುವೆಂಪು ವಿಶ್ವವಿದ್ಯಾಲಯದ ಡಾ. ಬಾಬು ಜಗಜೀವನ್ ರಾಮ್ ಸಂಶೋಧನಾ ಮತ್ತು ಅಧ್ಯಯನ ಕೇಂದ್ರ “ಅಂಚಿನಲ್ಲಿರುವ ಸಮುದಾಯಗಳು ಮತ್ತು ಸಾಮಾಜಿಕ ನ್ಯಾಯ” ಕುರಿತು ವಿವಿಯ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಿದ್ದು, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಬಿ.ಮಂಜಮ್ಮ ಜೋಗತಿ ಕಾರ್ಯಕ್ರಮವನ್ನು ಏಪ್ರಿಲ್ ನಾಳೆ ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರೊ. ಕೆ. ಎಂ. ಮೇತ್ರಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅಂಕಣಕಾರ ಡಾ. ಅರುಣ್ ಜೋಳದಕೂಡ್ಲಿಗಿ ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ಮತ್ತು ಡಾ. ಕೆ. ಆರ್. ಮಂಜುನಾಥ್ ದಲಿತ ಮತ್ತು ಆದಿವಾಸಿ ಸಮುದಾಯಗಳಲ್ಲಿ ಉದ್ಯಮಶೀಲತೆ ಕುರಿತು ಮಾತನಾಡಲಿದ್ದಾರೆ. ಖ್ಯಾತ ಜಾನಪದ ಗಾಯಕ ಮತ್ತು ಅಕಾಡೆಮಿ ಸದಸ್ಯ ಜೋಗಿಲ ಸಿದ್ದರಾಜು, ಈದಿನ ಡಾಟ್ ಕಾಂ ನ ಸುದ್ದಿ ಸಂಪಾದಕ ಬಿ. ವಿ. ಶ್ರೀನಾಥ್, ವಿಜಯ ಕರ್ನಾಟಕ ಪತ್ರಿಕೆಯ ಬಿ. ಎನ್. ಅನಿಲ್ ಕುಮಾರ್ ಭಾಗವಹಿಸಲಿದ್ದು, ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪ್ರತಿನಿಧಿಗಳು ವಿಚಾರ ಮಂಡಿಸಲಿದ್ದಾರೆ ಎಂದು ಕೇಂದ್ರದ ಸಂಯೋಜನಾಧಿಕಾರಿ ಡಾ. ಸತ್ಯಪ್ರಕಾಶ್ ಎಂ. ಆರ್ ತಿಳಿಸಿದ್ದಾರೆ.
ಪುಸ್ತಕ ಬಿಡುಗಡೆ: ಕುವೆಂಪು ವಿವಿ ಬಾಬು ಜಗಜೀವನ್ ರಾಮ್ ಅಧ್ಯಯನ ಕೇಂದ್ರ ಹೊರತಂದಿರುವ “ಸಂಸತ್ತಿನಲ್ಲಿ ಬಾಬು ಜಗಜೀವನ್ ರಾಮ್ ಭಾಷಣಗಳು, ಸಂ. 01: ರಕ್ಷಣೆ” ಕೃತಿಯು ಇದೇ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.