ಬೆಂಗಳೂರು,ಮಾ.೨೪:
ಹಿಜಾಬ್ ವಿಚಾರವಾಗಿ ಹೈಕೋರ್ಟ್ ತೀರ್ಪನ್ನು ಪ್ರಕಟಿಸಿದೆ. ಸಮವಸ್ತ್ರ ಕುರಿತು ಸರ್ಕಾರ ಏನು ಆದೇಶ ನೀಡಿತ್ತೋ ಅದು ಸರಿಯಾಗಿದೆ, ಸರ್ಕಾರದ ಆದೇಶ ಕಾನೂನು ಬದ್ಧವಾಗಿz ಆದರೂ ಇದಕ್ಕೆ ಪ್ರತಿಭಟನೆ ಬಂದ್ ನಡೆಸುವುದು ಸರಿಯಲ್ಲ. ಇಂತಹವುಗಳನ್ನು ಸರ್ಕಾರ ಸಂಪೂರ್ಣ ನಿಷೇಧಿಸಬೇಕೆಂದು ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್ ಅವರು ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಅವರು ಅಧಿವೇಶನದ ಶೂನ್ಯ ವೇಳೆಯಲ್ಲಿ ಮಾತನಾಡುತ್ತ ಉಡುಪಿಯ ಮಹಿಳಾ ಕಾಲೇಜಿನಲ್ಲಿ ೨೦೨೧ರ ಡಿಸೆಂಬರ್ನಲ್ಲಿ ೬ ವಿದ್ಯಾರ್ಥಿನಿಯರುಗಳಿಂದ ಆರಂಭವಾದ ಹಿಜಾಬ್ ವಿವಾದ ರಾಜ್ಯದಲ್ಲೆಡೆ ಹಾಗೂ ದೇಶದಲ್ಲಿಯು ಸಹ ಭಾರಿ ಕೋಲಾಹಲ ಸೃಷ್ಟಿಸಿದ್ದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕೋರಿ ಸಲ್ಲಿಸಿದ್ದ ಹಿಜಾಬ್ ಧಾರಿಗಳ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು. ಕರ್ನಾಟಕ ಹೈಕೋರ್ಟಿನ ತ್ರಿಸದಸ್ಯ ಪೀಠದಿಂದ ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲವೆಂದು ತಿಳಿಸಿದೆ ಎಂದರು.
ದಿನಾಂಕ:೧೫.೩,೨೦೨೨ರಂದು ಘನ ಕರ್ನಾಟಕ ಉಚ್ಚ ನ್ಯಾಯಾಲಯವು ತೀರ್ಪು ಪ್ರಕಟಗೊಂಡರೂ ಕೆಲವು ಮುಸ್ಲಿಂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿರುವುದು ದುರದೃಷ್ಟಕರ ಸಂಗತಿಯಾಗಿದೆ. ಅಲ್ಲದೇ ಈ ಮುಸ್ಲಿಂ ಸಂಘಟನೆಗಳು ಘನ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ವಿರೋಧಿಸಿ ಬಂದ್ಗೆ ಕರೆ ನೀಡಿರುವುದು ಸಹ ದುರದೃಷ್ಟಕರವಾಗಿರುತ್ತದೆ ಎಂದರು.
ಈ ಬಂದ್ನಿಂದ ಬೆಂಗಳೂರು, ಮಂಗಳೂರು, ಉಡುಪಿ, ಶಿವಮೊಗ್ಗ, ಮುಂತಾದ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡು ವ್ಯಾಪಾರ ಮುಂಗಟ್ಟುಗಳು ಅಸ್ತವ್ಯಸ್ಥಗೊಂಡಿರುವುದು ವಿಷಾದನೀಯ.ಈ ಮುಸ್ಲಿಂ ಸಂಘಟನೆಗಳು ಘನ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ಘನ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ. ಆದರೆ, ಘನ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಪ್ರತಿಭಟನೆ, ಬಂದ್, ಮಾಡಲು ಈ ಸಂಘಟನೆಗಳಿಗೆ ಅವಕಾಶವಿರುವುದಿಲ್ಲ ಎಂದಿದ್ದಾರೆ.
ಸರ್ಕಾರವು ಇಂತಹ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸಿ, ರಾಜ್ಯದಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಬಂದ್ ಮಾಡದಂತೆ ತಡೆಗಟ್ಟಲು ಕ್ರಮ ಜರುಗಿಸುವಂತೆ ಗೃಹ ಸಚಿವರ ಗಮನಕ್ಕೆ ತಂದಿರುವುದಾಗಿ ಎಂದು ಶಾಸಕ ಡಿ. ಎಸ್. ಅರುಣ್ ತಿಳಿಸಿದ್ದಾರೆ.