ಶಿವಮೊಗ್ಗ: ರಾಜ್ಯ ಸರ್ಕಾರ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಫೆ. 14 ರಂದು ಸೋಮವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಸಿಟಿ ರೈಲ್ವೇ ನಿಲ್ದಾಣದಿಂದ ಮೆರವಣಿಗೆಯಲ್ಲಿ ಹೊರಟು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರೈತರ 13 ತಿಂಗಳ ಹೋರಾಟದ ಫಲವಾಗಿ ಶಾಸನಬದ್ಧವಾಗಿ ವಾಪಸ್ ಪಡೆದಿದೆ. ಆದರೆ, ಈ ಕಾಯ್ದೆಗಳಿಗೆ ಪೂರಕವಾಗಿ ರಾಜ್ಯ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ತಂದಿದ್ದು, ಇನ್ನೂ ವಾಪಸ್ ಪಡೆದಿರುವುದಿಲ್ಲ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬೆಂಗಳೂರು ಅಧಿವೇಶನದಲ್ಲಿ ವಾಪಸ್ ಪಡೆಯುವುದಾಗಿ ಹೇಳಿದ್ದರು. ಆದರೆ ಇನ್ನೂ ವಾಪಸ್ ಪಡೆದಿಲ್ಲ ಎಂದು ದೂರಿದರು.

ಬಿಜೆಪಿ ನೇತೃತ್ವದ ಸರ್ಕಾರ ರೈತರ ಜಮೀನು ಕಸಿದುಕೊಂಡು ಭೂಹೀನರನ್ನಾಗಿ ಮಾಡುವ ಉದ್ದೇಶದಿಂದಲೇ ಈ ಕಾಯ್ದೆಗಳನ್ನು ಜಾರಿಗೆ ತಂದಿದೆ. ರೈತ ವಿರೋಧಿ ಧೋರಣೆ ಮುಂದುವರೆಸಿದೆ. ಭತ್ತ, ಜೋಳ, ರಾಗಿ, ತೊಗರಿ ಖರೀದಿ ಕೇಂದ್ರಗಳನ್ನು ಮುಚ್ಚಿದ್ದು, ರೈತರು ತಾವು ಬೆಳೆದ ಬೆಳೆಯನ್ನು ಅರ್ಧ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ ಎಂದರು.

ರೈತರಿಗೆ ರಾಷ್ಟ್ರೀಯ ವಿಪತ್ತಿನ ಅಡಿಯಲ್ಲಿ ಕೊಡಬೇಕಾಗಿದ್ದ ಬೆಳೆ ನಷ್ಟದ ಹಣವನ್ನು ಕೊಟ್ಟಿಲ್ಲ. ಬಗರ್ ಹುಕುಂ ಸಾಗುವಳಿ ಪತ್ರ ಕೊಟ್ಟಿಲ್ಲ. ಗ್ರಾಮೀಣಾಭಿವೃದ್ಧಿಗೆ ಕಳೆದ ವರ್ಷದ ಬಜೆಟ್ ಗಿಂತ ಕಡಿಮೆ ಮೊತ್ತ ತೆಗೆದಿರಿಸಲಾಗಿದೆ. ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದ ನದಿ ಜೋಡಣೆ ಯೋಜನೆ ಅಕ್ಕಪಕ್ಕದ ರಾಜ್ಯಗಳಿಗೆ ಲಾಭವಾಗುತ್ತದೆ ಹೊರತೂ ನಮ್ಮ ರಾಜ್ಯಕ್ಕೆ ಯಾವುದೇ ಲಾಭವಿಲ್ಲ ಎಂದರು.

ಸ್ವಾತಂತ್ರ್ಯ ನಂತರ ಅಂತರರಾಜ್ಯ ನದಿ ವಿವಾದಗಳು ಇನ್ನೂ ಬಗೆಹರಿದಿಲ್ಲ. ಆದ್ದರಿಂದ ನದಿ ಜೋಡಣೆ ಅಸಾಧ್ಯದ ಮಾತು ಈ ದೀರ್ಘಕಾಲಿಕ ಯೋಜನೆ ಬದಲು ಅದೇ ಹಣದಲ್ಲಿ ಕೆರೆ ಕಟ್ಟೆಗಳ ಹೂಳು ತೆಗೆಸುವುದು, ಒಡ್ಡುಗಳ ನಿರ್ಮಾಣ, ಮಳೆ ನೀರುಕೊಯ್ಲು ಮಾಡುವುದು, ಅಂತರ್ಜಲ ರಕ್ಷಣೆ ಮಾಡಿ ಸಣ್ಣ ನೀರಾವರಿ ಯೋಜನೆಗಳಿಗೆ ಒತ್ತು ಕೊಟ್ಟು ಸೋಲಾರ್, ಹನಿ ಮತ್ತು ತುಂತುರು ನೀರಾವರಿಗೆ ಶೇಕಡ 100 ರಷ್ಟು ಸಹಾಯಧನ ಒದಗಿಸುವ ಮೂಲಕ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ.ಪ್ರತಿ ಕ್ವಿಂಟಾಲ್ ಭತ್ತಕ್ಕೆ 3 ಸಾವಿರ ರೂ., ಮೆಕ್ಕೆಜೋಳಕ್ಕೆ 3 ಸಾವಿರ ರೂ., ರಾಗಿಗೆ 5 ಸಾವಿರ ರೂ. ನಿಗದಿ ಮಾಡಿ ಖರೀದಿಸಬೇಕೆಂದು ಒತ್ತಾಯಿಸಿದರು.

ಅನ್ನಭಾಗ್ಯ ಯೋಜನೆಗೆ ಬೇರೆ ರಾಜ್ಯದಿಂದ ಅಕ್ಕಿಯ ಆಮದು ನಿಲ್ಲಿಸಿ ನಮ್ಮ ರೈತರಿಂದಲೇ ಖರೀದಿಸಬೇಕು. ಪಂಪ್ ಸೆಟ್ ಗಳಿಗೆ 12 ಗಂಟೆ ಗಳ ಕಾಲ ತ್ರಿಫೇಸ್ ವಿದ್ಯುತ್ ನೀಡಬೇಕು. ಅರಣ್ಯ ಭೂಮಿ ಸಾಗುವಳಿ ಮಾಡುವ ರೈತರಿಗೆ ತೊಂದರೆ ಕೊಡಬಾರದು. ಹಕ್ಕು ಪತ್ರ ನೀಡಬೇಕು. ಹಾಲಿಗೆ ಲೀಟರ್ ಕನಿಷ್ಠ ದರ 40 ರೂ. ನಿಗದಿ ಮಾಡಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿದ್ದು, ಬೆಲೆ ಏರಿಕೆ ನಿಯಂತ್ರಿಸಬೇಕು. ರೈತರ ಮೇಲಿನ ಎಲ್ಲಾ ಕೇಸ್ ಕೈಬಿಡಬೇಕು ಎಂದು ಒತ್ತಾಯಿಸಿದರು. 

ಈ ಎಲ್ಲಾ ವಿಚಾರಗಳನ್ನು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿಧಾನಸೌಧ ಮುತ್ತಿಗೆ ಚಳವಳಿ ಹಮ್ಮಿಕೊಂಡಿದ್ದು, ಜಿಲ್ಲೆಯಿಂದ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ರೈತರು, ಕೃಷಿ ಕೂಲಿ ಕಾರ್ಮಿಕರು ಮತ್ತು ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳು ಮಧ್ಯಪ್ರವೇಶ ಮಾಡಬಾರದು. ಮಕ್ಕಳ ಶಿಕ್ಷಣ ಹಕ್ಕು ಕಸಿದುಕೊಳ್ಳಬಾರದು ಎಂದು ಅವರು ಆಗ್ರಹಿಸಿದರು. 

ಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ಸಿ. ಚಂದ್ರಪ್ಪ, ಕೆ. ರಾಘವೇಂದ್ರ, ಟಿ.ಎಂ, ಚಂದ್ರಪ್ಪ ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!