ಶಿವಮೊಗ್ಗ: ಬಡವರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಸಿಗಬೇಕಾದ ಅಕ್ಕಿಯನ್ನು ಕದ್ದು ಅದಕ್ಕೆ ಪಾಲೀಶ್ ಮಾಡಿ ಚೀಲ ಬದಲಿಸಿ ಅನ್ಯ ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್ ನೇತೃತ್ವದ ತಂಡ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ಇಂದು195 ಕ್ವಿಂಟಾಲ್ ಅಕ್ಕಿಯೊಂದಿಗೆ 2ಟ್ಯಾಂಕರ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್, ಸಬ್ಇನ್ಸ್ಪೆಕ್ಟರ್ ಮೀರಿಂಡಾ, ಸಿಬ್ಬಂದಿಗಳಾದ ಕಲ್ಲನಗೌಡ, ಕೊಟ್ರೇಶ್ ಹಾಗೂ ಇತರರು ಗೋಂಧಿ ಚಟ್ನಳ್ಳಿಯಲ್ಲಿರುವ ಮಲ್ಲಿಕಾರ್ಜುನ ರೈಸ್ಮಿಲ್ ಹಿಂಭಾಗದ ಗೋಡೌನ್ಗೆ ದಾಳಿ ನಡೆಸಿ ಈ ಅಕ್ರಮವನ್ನು ಬೇಧಿಸಿದ್ದಾರೆ.
ಪಡಿತರ ಚೀಟಿಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಅಲ್ಲಿನ ಮೂಲಚೀಲಗಳನ್ನು ಬದಲಿಸುವ ಜೊತೆಗೆ ಅಕ್ಕಿಗೆ ಪಾಲೀಶ್ ನೀಡಿ ಹೊಸತನ ಸೃಷ್ಠಿಸಿಕೊಂಡು ಕೇರಳ ಸೇರಿದಂತೆ ಅನ್ಯರಾಜ್ಯಗಳಿಗೆ ಅಕ್ರಮವಾಗಿ ಸರಬರಾಜು ಮಾಡುತ್ತಿದ್ದ ದೊಡ್ಡ ಜಾಲ ಶಿವಮೊಗ್ಗದಲ್ಲಿ ನಿರಂತರವಾಗಿ ನಡೆಸುತ್ತಿತ್ತು. ಈ ಪ್ರಕರಣವನ್ನು ಬೇಧಿಸಿರುವ ಪೊಲೀಸ್ ತಂಡಕ್ಕೆ ವಾಹನ ಚಾಲಕ ಇರ್ಫಾನ್ ಪತ್ತೆಯಾಗಿದ್ದು, ಆತನನ್ನು ವಿಚಾರಗೊಳಪಡಿಸಿದ್ದಾರೆ.
ವಾದಿ ಎ ಹುದಾದ ಮನ್ಸೂರ್ ಎಂಬಾತ ಆರೋಪಿಯಾಗಿದ್ದು, ಆತ ಈ ಕೃತ್ಯ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಪರಾರಿಯಾಗಿರುವ ಆತನ ಪತ್ತೆಗೆ ಗ್ರಾಮಾಂತರ ಪೊಲೀಸರು ಜಾಲ ಬೀಸಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.