ಸಾಗರ : ಶರಾವತಿ ಹಿನ್ನೀರು ಭಾಗದ ಆರೋಗ್ಯ ಮತ್ತು ನೆಟ್‌ವರ್ಕ್ ಸಮಸ್ಯೆ ನಿವಾರಿಸುವ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಗಾಂಧಿಮೈದಾನದಲ್ಲಿ ಗುರುವಾರ ಆರೋಗ್ಯ ಇಲಾಖೆ ವತಿಯಿಂದ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಲಾದ ನೂತನ 108 ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಹಿನ್ನೀರು ಭಾಗದ ಆರೋಗ್ಯ, ಸಂಪರ್ಕ ಹಾಗೂ ರಸ್ತೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದರು.


ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್ ಹಾಳಾದ ಹಿನ್ನೆಲೆಯಲ್ಲಿ ಹೊಸ ೧೦೮ ವಾಹನ ನೀಡುವಂತೆ ಆರೋಗ್ಯ ಸಚಿವರು ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಮಾಡಲಾಗಿತ್ತು. ಮೂರು ದಿನದೊಳಗೆ ವಾಹನ ನೀಡದೆ ಹೋದಲ್ಲಿ ಇಲಾಖೆ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ಸಹ ನೀಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಸಚಿವರು ಮತ್ತು ಅಧಿಕಾರಿಗಳು ಅಂಬ್ಯುಲೆನ್ಸ್ ನೀಡುವ ಮೂಲಕ ಸಹಕಾರ ನೀಡಿದ್ದಾರೆ. ಇಂದಿನಿಂದಲೇ ಅಂಬ್ಯುಲೆನ್ಸ್ ತನ್ನ ಸೇವೆ ಪ್ರಾರಂಭಿಸಲಿದೆ. ವೈದ್ಯರ ಕೊರತೆ ಬಗ್ಗೆ ಮಾಹಿತಿ ಇದ್ದು, ಯಾರೂ ವೈದ್ಯರು ಹಿನ್ನೀರು ಭಾಗಕ್ಕೆ ಬರುತ್ತಿಲ್ಲ. ಯಾರಾದರೂ ಬರುವವರಿದ್ದರೆ ತಿಳಿಸಿ, ಅವರನ್ನು ಇಲ್ಲಿಗೆ ತರುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.


ನೆಟ್‌ವರ್ಕ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸಂಸದರ ನಿಧಿಯಿಂದ ೨೦ ಲಕ್ಷ, ನನ್ನ ನಿಧಿಯಿಂದ ೧೦ ಲಕ್ಷ ರೂ. ಮತ್ತು ವಿಧಾನ ಪರಿಷತ್ ರುದ್ರೇಗೌಡರ ನಿಧಿಯಿಂದ ೫ ಲಕ್ಷ ರೂ. ಅನುದಾನ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಗುರುವಾರ ಟೆಲಿಕಾಂ ಸಂಸ್ಥೆ ಜೊತೆ ಸಭೆ ನಡೆಸಲಿದ್ದಾರೆ. ಹಣವು ಗ್ರಾಮ ಪಂಚಾಯ್ತಿಗೆ ಜಮೆ ಆಗಲಿದ್ದು, ಗ್ರಾಮ ಪಂಚಾಯ್ತಿ ಮೂಲಕ ನೇರವಾಗಿ ಬಿ.ಎಸ್.ಎನ್.ಎಲ್. ಖಾತೆ ಹಣ ಜಮಾ ಆಗುತ್ತದೆ. ನಂತರ ನೆಟ್‌ವರ್ಕ್ ಅಳವಡಿಸುವ ಕಾರ್ಯ ಪ್ರಾರಂಭವಾಗುತ್ತದೆ ಎಂದು ಹೇಳಿದರು.
ಮಂಗನ ಕಾಯಿಲೆ ಮತ್ತು ಕೋರೋನಾ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಸೋಮವಾರ ಅಧಿಕಾರಿಗಳ ಸಭೆ ನಡೆಸಿ ನಿಯಮಪಾಲನೆ ಕುರಿತು ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ. ಕಳೆದ ಬಾರಿ ಕೋವಿಡ್ ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಬೇಕಾದ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ. ತಜ್ಞರ ಅಭಿಪ್ರಾಯದ ಮೇರೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಸೂಚಿಸಿದ್ದು, ಎಲ್ಲರೂ ಪಾಲನೆ ಮಾಡಬೇಕು. ಸಾಗರದಲ್ಲಿ ಸಹ ಕೊರೋನಾ ಪ್ರಕರಣ ಪತ್ತೆಯಾಗುತ್ತಿರುವುದರಿಂದ ಸಾರ್ವಜನಿಕರು ಹೆಚ್ಚು ಜಾಗೃತೆಯಿಂದ ಇರಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರ ಅಧ್ಯಕ್ಷ ಗಣೇಶಪ್ರಸಾದ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ತುಕಾರಾಮ್, ಪ್ರಮುಖರಾದ ಪ್ರಸನ್ನ ಕೆರೆಕೈ, ಜಿ.ಪಿ.ಶ್ರೀನಿವಾಸ್, ಸಂತೋಷಕುಮಾರ್ ಶೆಟ್ಟಿ, ಡಾ. ವಾಸುದೇವ, ಮಾ.ಸ.ನಂಜುಂಡಸ್ವಾಮಿ ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!