ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಸರ್ಕಾರಿ ನೌಕರರಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿ ನಿಯಮಾವಳಿಗಳನ್ನು ಪಾಲಿಸಿಕೊಂಡು ಹೋಗುವಂತೆ ತಿಳಿಸಿದೆ.
ಸೋಷಿಯನ್ ಮೀಡಿಯಾ ಬಳಸೋ ರಾಜ್ಯ ಸರ್ಕಾರಿ ನೌಕರರಿಗೆ ಇದೊಂದು ಎಚ್ಚರಿಕೆ ಗಂಟೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಾಗರತ್ನ ವಿ ಪಾಟೀಲ್ ಸುತ್ತೋಲೆ ಹೊರಡಿಸಿದ್ದು, ಸರ್ಕಾರಿ ನೌಕರನು ಅನುಚಿತವಾಗಿ ಇಲ್ಲಿ ಯಾವುದನ್ನೂ ಮಾಡುವಂತಿಲ್ಲ. ಪ್ರತಿಯೊಬ್ಬ ಸರ್ಕಾರಿ ನೌಕರನು ರಾಜಕೀಯವಾಗಿ ತಟಸ್ಥನಾಗರಿಬೇಕು. ಕರ್ನಾಟಕ ರಾಜ್ಯ ನಾಗರೀಕ ಸೇವಾ(ನಡತೆ) ನಿಯಮಗಳು, 2021ರ ನಿಯಮ 3(5)ರಡಿಯಲ್ಲಿ ಸರ್ಕಾರಿ ನೌಕರನು ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಮತ್ತು ನೈತಿಕತೆಯನ್ನು ಎತ್ತಿ ಹಿಡಿಯಬೇಕು ಎಂದು ತಿಳಿಸಿದೆ.
2021ರ ನಿಯಮಗಳ ನಿಯಮ 11ರ ಅನುಸಾರ ಸರ್ಕಾರಿ ನೌಕರನು ಕರ್ನಾಟಕ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಅಥವಾ ಯಾವುದೇ ಇತರೇ ರಾಜ್ಯ ಸರ್ಕಾರದ ಪ್ರಸ್ತುತ ಅಥವಾ ಇತ್ತೀಚಿನ ಯಾವುದೇ ನೀತಿಯ ಅಥವಾ ಕ್ರಮದ ಬಗ್ಗೆ ಪ್ರತಿಕೂಲ ಟೀಕೆಯ ಪರಿಣಾಮ ಹೊಂದಿರುವಂತ ಸಂಗತಿಗಳ ನಿರೂಪಣೆಯನ್ನು ಮಾಡುವಂತಿಲ್ಲ. ಅಭಿಪ್ರಾಯವನ್ನು ವ್ಯಕ್ತ ಪಡಿಸುವಂತಿಲ್ಲ.
ಇತ್ತೀಚಿನ ದಿನಗಳಲ್ಲಿ ಕೆಲ ಸರ್ಕಾರಿ ನೌಕರರು ಅಂತರ್ಜಾಲದ ವೆಬ್ ಸೈಟ್ ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ 2021ರ ನಡತೆ ನಿಯಮಗಳ ಅವಕಾಶಗಳನ್ನು ಮೀರಿ, ಸರ್ಕಾರ ಮತ್ತು ಇತರೆ ಸರ್ಕಾರಿ ನೌಕರರಿಗೆ ಮುಜುಗರ ಉಂಟುಮಾಡುವಂತೆ, ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿರೋದು ಕಂಡು ಬಂದಿದೆ. ಜೊತೆಗೆ ಸರ್ಕಾರದ ನೀತಿ ವಿರುದ್ಧ, ರಾಜಕೀಯ ಪಕ್ಷಗಳ ವಿರುದ್ಧ ಲೇಖನ, ಅಭಿಪ್ರಾಯ ಮತ್ತು ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡುತ್ತಿರೋದು ಗಮನಿಸಲಾಗಿದೆ.
ಈ ಹಿನ್ನಲೆಯಲ್ಲಿ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ನೌಕರನು ಪ್ರದರ್ಶಿಸುವ ವರ್ತನೆಯು ಸಹ ಕರ್ನಾಟಕ ರಾಜ್ಯ ನಾಗರೀಕ ಸೇವಾ(ನಡತೆ) ನಿಯಮಗಳು 2021ರ ವ್ಯಾಪ್ತಿಗೆ ಒಳಪಡುತ್ತವೆ. ಈ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಸರ್ಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದೆ