ಶಿವಮೊಗ್ಗ: ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳು ಶಿವಮೊಗ್ಗ ಇವರ ಸಹಯೋಗದೊಂದಿಗೆ ನವೆಂಬರ್ 12 ಮತ್ತು 13 ರಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ನವುಲೆ ಶಿವಮೊಗ್ಗ ಇಲ್ಲಿ ಕೃಷಿ ಮೇಳ-2021 ಹಮ್ಮಿಕೊಳ್ಳಲಾಗಿದೆ.
ನವೆಂಬರ್ 12 ರ ಬೆಳಿಗ್ಗೆ 10.30 ಕ್ಕೆ ಕೃಷಿ ಸಚಿವರು ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾದ ಬಿ.ಸಿ.ಪಾಟೀಲ್ ಇವರು ಕೃಷಿ ಮೇಳದ ಉದ್ಘಾಟನೆಯನ್ನು ನೆರವೇರಿಸುವರು. ಗ್ರಾಮಿಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ಇವರು ವಸ್ತುಪ್ರದರ್ಶನದ ಉದ್ಘಾಟನೆ ನೆರವೇರಿಸುವರು. ಗೃಹ ಸಚಿವರು ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಆರಗ ಜ್ಞಾನೇಂದ್ರ ಇವರು ಬೆಳೆ ಪ್ರಾತ್ಯಕ್ಷಿಕೆ ಸಸ್ಯಕಾಶಿ ಉದ್ಘಾಟನೆ ನೆರವೇರಿಸುವರು.
ನವೆಂಬರ್ 13 ರಂದು ಬೆಳಿಗ್ಗೆ 10.30 ಕ್ಕೆ ‘ಕೋವಿಡ್ ನಂತರದ ಕೃಷಿ-ರೈತರ ಆದಾಯ ದ್ವಿಗುಣ ಮತತು ಪೌಷ್ಟಿಕಾಂಶಗಳ ಭದ್ರತೆ’ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಎಂ.ಜೆ.ಚಂದ್ರೇಗೌಡ, ಪ್ರಧಾನ ವಿಜ್ಞಾನಿ, ಅಟಾರಿ, ಬೆಂಗಳೂರು, ಡಾ. ರೂಪ.ಟಿ.ಆರ್ ಪ್ರಧಾನ ವಿಜ್ಞಾನಿ ಐಐಹೆಚ್ಆರ್, ಬೆಂಗಳೂರು, ಪ್ರಕಾಶ್ ಜಿ.ಆರ್, ಎಸ್ಜಿಎಂ ಟೆಕ್ನಾಲಜೀಸ್ ಶಿವಮೊಗ್ಗ, ಡಾ.ಸಿ.ನಾರಾಯಣಸ್ವಾಮಿ ರಾಜ್ಯ ಮಾರುಕಟ್ಟೆ ವ್ಯವಸ್ಥಾಪಕರು, ಇಫ್ಕೋ ಬೆಂಗಳೂರು ಇವರು ಪಾಲ್ಗೊಳ್ಳುವರು.