ಶಿವಮೊಗ್ಗ: ತಾಲೂಕಿನ ಚಿಕ್ಕಮರಡಿ ಗ್ರಾಮದಲ್ಲಿ ಇತ್ತೀಚೆಗೆ ಹಾಡಹಗಲೇ ಮನೆಯವರಿಗೆ ಹಲ್ಲೆ ನಡೆಸಿ ದರೋಡೆ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ  ಪೊಲೀಸರು  ಐವರನ್ನು ಬಂಧಿಸಿದ್ದಾರೆ.
 ಶಿವಮೊಗ್ಗ ಕಾಶಿಪುರದ ಅವಿನಾಶ್ (೩೦), ಕೋಣೆಹೊಸೂರಿನ ಲೋಹಿತ್ ಶೆಟ್ಟಿ (೩೨)  ಸಂತೆಬೆನ್ನೂರಿನ ಧರ್‍ಮರಾಜ್ (೫೨), ವಿನಾಯಕ ವೃತ್ತದ ಬಳಿಯ ವಾಸಿ ನಾಗರಾಜ (೧೯) ಕೊಪ್ಪಳ ಜಿಲ್ಲೆ ಬಾನಾಪುರದ ವೀರಯ್ಯ (೨೫)  ಬಂಧಿತರು.
ಆ. ೩ರಂದು ಸಂಜೆಯ ವೇಳೆ ಚಿಕ್ಕಮರಡಿ ಗ್ರಾಮದ ಜಯಣ್ಣ ಎನ್ನುವವರ ಮನೆಗೆ ನುಗ್ಗಿದ್ದ ಈ ಐವರ ತಂಡ ಮನೆಯವರಿಗೆ ಮನಸೋ ಇಚ್ಛೆ ಹಲ್ಲೆ ನಡೆಸಿ  ಮಾಂಗಲ್ಯ ಸರವನ್ನು ಮೊದಲು ಕಿತ್ತುಕೊಂಡು ಮನೆಯೊಡತಿಯ ಕೈಲಿದ್ದ  ಬೀರುವಿನ ಬೀಗದ ಕೈಯನ್ನು ಬಲವಂತದಿಂದ ಕಸಿದುಕೊಂಡು ನಗದು ಹಣ, ಬಂಗಾರ, ಬೆಳ್ಳಿ ಮೊದಲಾದ ಅಪಾರ ಪ್ರಮಾಣದ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದರು.










ಜಯಣ್ಣ ಮತ್ತು ಅವರ ಮಗಳು ಮೇಘನಾ ಎನ್ನುವವರಿಗೆ ಚಾಕುವಿನಿಂದ ಇರಿದಿದ್ದರು. ಇವರಿಬ್ಬರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಸಿಕ್ಕಿದ ಕೆಲವು ಸುಳಿವುಗಳ ಆಧಾರದಲ್ಲಿ ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿ ಕರೆತರಲಾಗಿದೆ.
ಬಂಧಿತರಿಂದ ಒಂದು ದ್ವಿಚಕ್ರ ವಾಹನ, ಒಂದು ವ್ಯಾಗನರ್, ೩ ಲಕ್ಷ ರೂ. ನಗದು, ೫. ೭೦ ಲಕ್ಷ ರೂ  ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
…………………..


 
ರೌಡಿಗೆ ಇರಿತ: ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಸಕ್ರೆಬೈಲಿನ ಹೋಟೆಲೊಂದರಲ್ಲಿ ಮಧ್ಯಾಹ್ನದ ಊಟಕ್ಕೆ ತೆರಳಿದ್ದ ರೌಡಿಯ ಜೊತೆ ಯುವಕರ ಗುಂಪೊಂದು ಜಗಳ ನಡೆಸಿ ಆತನಿಗೆ ಚಾಕುವಿನಿಂದ ತೀವ್ರ ಸ್ವರೂಪದಲ್ಲಿ ಇರಿದು ಪರಾರಿಯಾದ ಘಟನೆ ಸೋಮವಾರ ನಡೆದಿದೆ.


ಲಂಬು ಶರು ಯಾನೆ ದಾದಾಪೀರ್ ಎನ್ನುವವನೇ ಗಾಯಗೊಂಡವನು. ದಾದಾಪೀರ್ ತನ್ನಿಬ್ಬರು ಸಹಚರರೊಂದಿಗೆ ಊಟಕ್ಕೆ ಹೋದಾಗ ಅಲ್ಲಿಗೆ ಟಿಪ್ಪುನಗರದ ಯುವಕರ ಗುಂಪೊಂದು ಬಂದಿತ್ತೆನ್ನಲಾಗಿದೆ. ಊಟ ಮುಗಿಸಿ ಹೊರಬರುವಾಗ  ಈ ಹುಡುಗರು ನಮಗೆ ನೀನು ಬಾಸ್ ಅಲ್ಲ, ನಮ್ಮ ಬಾಸ್ ಉಸ್ತಾದ್ ಎಂದು  ಹೇಳಿ ಜಗಳ ತೆಗೆದರೆನ್ನಲಾಗಿದೆ. ಮಾತಿಗೆ ಮಾತು ಬೆಳೆದಾಗ ಈ ಹುಡುಗರು ತಮ್ಮಲ್ಲಿದ್ದ ಚಾಕುವಿನಿಂದ ದಾದಾಪೀರ್‌ನ  ಎರಡೂ ಪಕ್ಕೆಲುಬುಗಳ ಬಳಿ ಇರಿದಿದ್ದಾರೆ. ಕೂಡಲೇ ಆತನನ್ನು ಮೆಗ್ಗಾನ್‌ಗೆ ದಾಖಲಿಸಲಾಗಿದೆ.
ದಾದಾಪೀರ್‌ಗೆ ಮೂರು ವರ್ಷದ ಹಿಂದೆ ಅಪಘಾತದಲ್ಲಿ ಪಕ್ಕೆಲುಬಿಗೆ ಪೆಟ್ಟು ಬಿದ್ದಿತ್ತು.  ಇಂದು ಅದೇ ಜಾಗದಲ್ಲಿ ಮತ್ತೆ ಇರಿಯಲಾಗಿದೆ.
ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ಜರುಗಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!