ಭದ್ರಾವತಿ: ಡೈರಿ ವೃತ್ತದ ಸಮೀಪ ತೆರೆಯಲಾಗಿರುವ ಎರಡು ಮದ್ಯದಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಡೈರಿ ಬಸ್ ನಿಲ್ದಾಣದ ಸಮೀಪದಲ್ಲಿ ಆಯುರ್ವೇದಿಕ್ ಕಾಲೇಜು, ನಂದಿನಿ ಹಾಲಿನ ಡೈರಿ, ಕೆಎಸ್ಆರ್ ಪಿ ಪೊಲೀಸ್ ಎಂಟನೇ ಬೆಟಾಲಿಯನ್ ಹಾಗು ಕೈಗಾರಿಕಾ ಪ್ರದೇಶ, ಶಾಯಿ ಗಾರ್ಮೆಂಟ್ಸ್ ಗಳಿಗೆ ಪ್ರತಿನಿತ್ಯ ಕೆಲಸಕ್ಕೆ ಹಾಜರಾಗುವ ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು, ಪ್ರಯಾಣಿಕರು ಇದೆ ರಸ್ತೆಯಲ್ಲಿ ಓಡಾಡಬೇಕಾಗಿದೆ ಇದರಿಂದ ಸಂಜೆವೇಳೆ ಓಡಾಡುವ ಹೆಣ್ಣುಮಕ್ಕಳಿಗೆ ಅನಾನುಕೂಲ ಉಂಟಾಗಿ ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮದ್ಯದಂಗಡಿಗಳಲ್ಲಿ ಮದ್ಯ ಸೇವನೆ ಮಾಡಲು ಬರುವವರಿಂದ ವಿನಾಕಾರಣ ತೊಂದರೆ ಎದುರಾಗಿದೆ. ಆಗಾಗ ಮದ್ಯಸೇವನೆ ಮಾಡುವವರ ನಡುವೆ ಗಲಾಟೆ ನಡೆದು ಆಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಈ ಸಂಬಂಧ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಎರಡು ಮದ್ಯದಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಬೇಕು. ಸಾರ್ವಜನಿ ಕರಿಗೆ ಯಾವುದೇ ರೀತಿ ತೊಂದರೆ ಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು ತಕ್ಷಣ ಮದ್ಯದಂಗ ಡಿ ತೆರವು ಮಾಡದಿದ್ದಲ್ಲಿ ಮುಂದಿನ ದಿನ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಗ್ರಹೋರಾಟ ಹಮ್ಮಿಕೊಳ್ಳಲಾಗು ವುದು ಎಂದು ಎಚ್ಚರಿಕೆ ನೀಡಿದರು.
ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಹಿರೇಮಠ್, ಚಾಣಕ್ಯ ಸೇನೆಯ ರಾಜ್ಯಾಧ್ಯಕ್ಷ ನಾರಾಯಣ ಐಹೊಳೆ ಮದ್ಯದಂಗಡಿ ತೆರವುಗೊಳಿಸು ವಂತೆ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆರ್. ಪ್ರದೀಪ್, ಅಬಕಾರಿ ಇನ್ಸ್ಪೆಕ್ಟರ್ ಮತ್ತು ನ್ಯೂಟೌನ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಭಾರತಿ ಅವರಿಗೆ ಪ್ರತ್ಯೇಕ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.
ರಕ್ಷಣಾವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾರದ, ಉಪಾಧ್ಯಕ್ಷ ರಾದ ಅನಿತಾ, ಗೌರಮ್ಮ, ತಾಲೂಕು ಅಧ್ಯಕ್ಷೆ ಮಹೇಶ್ವರಿ, ಗೀತಾ, ರೂಪ ನಾರಾಯಣ, ಪದಾಧಿಕಾರಿಗಳಾದ ನಾಗರತ್ನ, ಶೋಭಾ, ಆಸ್ಮಿತ್ತಾಜ್, ಪದ್ಮಮ್ಮ, ಮುಖಂಡರಾದ ಸೋಮಶೇಖರ್, ಪ್ರಶಾಂತ್, ಯಶವಂತ್, ನವೀನ್, ಮಾಯಣ್ಣ, ಬಾಲಕೃಷ್ಣ, ಆಯುರ್ವೇದ ಕಾಲೇಜಿನ ನೂರಾರು ವಿದ್ಯಾರ್ಥಿಗಳು, ಸ್ಥಳೀಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.