ಶಿವಮೊಗ್ಗ, ಆ.12:

ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಆದ್ಯತೆ ಮೇರೆಗೆ ತೆರವುಗಳಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೆರೆಗಳ ಒತ್ತುವರಿ ತೆರವು ಪ್ರಗತಿ ಪರಿಶೀಲನೆ ನಡೆಸಿದರು.
ರಾಷ್ಟ್ರೀಯ ಹಸಿರು ಪ್ರಾಧಿಕಾರದ ಆದೇಶದಂತೆ ಜಿಲ್ಲಾ ಮಟ್ಟದಲ್ಲಿ ಈ ಕುರಿತಾದ ಸಮಿತಿಯನ್ನು ರಚಿಸಲಾಗಿದೆ. ಎಲ್ಲಾ ಕೆರೆಗಳ ಸರ್ವೇ ಕಾರ್ಯವನ್ನು ಹಂತ ಹಂತವಾಗಿ ಪೂರ್ಣಗೊಳಿಸಲು ಎಲ್ಲಾ ತಹಶೀಲ್ದಾರ್ ಕ್ರಮ ವಹಿಸಬೇಕು. ಪ್ರತಿ ತಿಂಗಳು ಗುರಿಯನ್ನು ನಿಗದಿಪಡಿಸಿ ಕೆರೆಗಳ ಒತ್ತುವರಿ ತೆರವುಗೊಳಿಸಿ ವರದಿಯನ್ನು ಸಲ್ಲಿಸಬೇಕು ಎಂದು ಹೇಳಿದರು.

ಒಟ್ಟು 6803 ಕೆರೆಗಳು

ಶಿವಮೊಗ್ಗ 896
ಭದ್ರಾವತಿ 427
ತೀರ್ಥಹಳ್ಳಿ 1242
ಸಾಗರ 484
ಸೊರಬ 1204
ಶಿಕಾರಿಪುರ 1271
ಹೊಸನಗರ 1279


ಕೆರೆಗಳ ಒತ್ತುವರಿ ತೆರವುಗೊಳಿಸಿದ ಬಳಿಕ, ಆ ಕೆರೆಯನ್ನು ಸಂಬಂಧಪಟ್ಟ ಇಲಾಖೆಯ ಸುಪರ್ದಿಗೆ ಒಪ್ಪಿಸಿ, ಇಲಾಖೆಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಅಧಿಸೂಚನೆ ಹೊರಡಿಸಬೇಕು. ಮತ್ತೆ ಒತ್ತುವರಿಯಾದರೆ ಆಯಾ ಅಧಿಕಾರಿಯನ್ನು ಹೊಣೆಗಾರರನ್ನಾಗಿಸಿ ಮೊಕದ್ದಮೆ ದಾಖಲಿಸಬೇಕು ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಕೆರೆಯನ್ನು ಒತ್ತುವರಿ ಮಾಡಲು ಅವಕಾಶ ಕಲ್ಪಿಸಬಾರದು. ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ತಂಡ ರಚಿಸಿಕೊಂಡು ಒತ್ತುವರಿ ತೆರವು ಮತ್ತು ಸಂರಕ್ಷಣೆಗೆ ಕ್ರಿಯಾ ಯೋಜನೆ ರೂಪಿಸಬೇಕು. ಎಚ್ಚರಿಕೆ ಕೊಟ್ಟ ಬಳಿಕವೂ ಒತ್ತುವರಿ ಮುಂದುವರೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಕೆರೆಗಳ ವಿವರ: ಜಿಲ್ಲೆಯಲ್ಲಿ ಒಟ್ಟು 6803 ಕೆರೆಗಳಿದ್ದು, 51368 ಎಕ್ರೆ ಪ್ರದೇಶ ವ್ಯಾಪ್ತಿಯಲ್ಲಿದೆ. ಶಿವಮೊಗ್ಗ 896, ಭದ್ರಾವತಿ 427, ತೀರ್ಥಹಳ್ಳಿ 1242, ಸಾಗರ 484, ಸೊರಬ 1204,ಶಿಕಾರಿಪುರ 1271, ಹೊಸನಗರ 1279, ಇದುವರೆಗೆ 1373 ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಳಿಸಲಾಗಿದ್ದು, 11,152 ಎಕ್ರೆ ವ್ಯಾಪ್ತಿ ಗುರುತಿಸಲಾಗಿದೆ. ಇನ್ನೂ 5430 ಕೆರೆಗಳ ಸರ್ವೇ ಕಾರ್ಯ ನಡೆಸಬೇಕಾಗಿದ್ದು, 39,801 ಎಕ್ರೆ ಪ್ರದೇಶದಲ್ಲಿದೆ. ಇದುವರೆಗೆ ಸರ್ವೆ ಮಾಡಲಾಗಿರುವ ಕೆರೆಗಳ ಪೈಕಿ 660 ಕೆರೆಗಳಲ್ಲಿ 2284 ಎಕ್ರೆ ಒತ್ತುವರಿ ಗುರುತಿಸಲಾಗಿದೆ. ಇವುಗಳ ಪೈಕಿ 231 ಕೆರೆಗಳಲ್ಲಿ 576 ಎಕ್ರೆ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇನ್ನೂ 429 ಕೆರೆಗಳ 398 ಎಕ್ರೆ ಒತ್ತುವರಿಯನ್ನು ತೆರವುಗೊಳಿಸಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಹೆಚ್.ಟಿ.ಶೇಖರ್, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ, ಯೋಜನಾ ನಿರ್ದೇಶಕ ಮೂಕಪ್ಪ ಕರಿಭೀಮಣ್ಣನವರ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


By admin

ನಿಮ್ಮದೊಂದು ಉತ್ತರ

error: Content is protected !!