ಶಿವಮೊಗ್ಗ: ನಮ್ಮ ಸಮಾಜವನ್ನು ಭಾಷೆ, ಕಲೆ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಕಟ್ಟಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಅನನ್ಯ ಮಂಟಪ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಸಾಂಸ್ಕೃತಿಕತೆಯ ತವರೂರು. ಆಧುನಿಕತೆಯ ಅಂಧತ್ವದಲ್ಲಿ ಅಂತಹ ಸಂಸ್ಕೃತಿ ಸಂಸ್ಕಾರಗಳು ಕಣ್ಮರೆಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ಸೃಜನಶೀಲ ಬರವಣಿಗೆ ಕಣ್ಮರೆಯಾಗುತ್ತಿದೆ ಎನ್ನುವ ಆತಂಕಗಳ ನಡುವೆ ಸುದ್ದಿ ಪತ್ರಿಕೆಗಳು ಹಾಗೂ ರಂಗಭೂಮಿಯ ಕ್ರಿಯಾಶೀಲ ಚಟುವಟಿಕೆಗಳು ಅಂತಹ ಆತಂಕಗಳನ್ನು ಒಂದಿಷ್ಟು ದೂರಾಗಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ಸೃಜನಶೀಲ ಸಾಹಿತ್ಯ ಮತ್ತು ಪ್ರಚಲಿತತೆಯ ಜ್ಞಾನಕ್ಕಾಗಿ ಪತ್ರಿಕೆಗಳನ್ನು ಮರೆಯದೆ ಓದಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈಗಿನ ಕಿರುತೆರೆಯಲ್ಲಿ ಯಾವ ನೈತಿಕ ಮೌಲ್ಯಗಳನ್ನು ತೋರಿಸುತ್ತಿಲ್ಲ. ಇದರಿಂದ ಎಳೆ ಹೃದಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಕುರಿತಾಗಿ ಪೋಷಕರು ಜಾಗೃತರಾಗಬೇಕಿದೆ. ಪುಸ್ತಕಗಳನ್ನು ಪರಿಚಯಿಸುವ ಕಾರ್ಯ ನಡೆಯಬೇಕಿದ್ದು, ಆಧುನಿಕತೆಯೆ ಸರ್ವಸ್ವ ಎಂಬ ಭ್ರಮೆ ಬೇಡ ಎಂದು ಹೇಳಿದರು.
ಸುಗಮ ಸಂಗೀತ ಕಲಾವಿದ ಪ್ರಹ್ಲಾದ್ ದೀಕ್ಷಿತ್ ಮಾತನಾಡಿ, ಕನ್ನಡ ಸಾಹಿತ್ಯವನ್ನು ಜನರ ಮನದಾಳದಲ್ಲಿ ಉಳಿಸುವಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸಿದೆ. ಸಾಹಿತ್ಯ ಲೋಕಕ್ಕೆ ಅದ್ಭುತ ಕೊಡುಗೆ ನೀಡಿದ ಕವಿಗಳು ಎಂದೆಂದಿಗೂ ಅಮರ. ಇಂದಿನ ಚಲನಚಿತ್ರ ಗೀತೆಗಳಲ್ಲಿ ಜೀವಕಳೆ ಎಂಬುದು ಕಣ್ಮರೆಯಾಗಿದೆ. ಕೇವಲ ಮನರಂಜನೆ ಒಂದೆ ಮೂಲ ಆಶಯವಾಗಿ ಉಳಿದುಬಿಡುತ್ತಿದೆ. ಇದು ನಿಜಕ್ಕು ಆತಂಕಕಾರಿ ವಿಚಾರ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾತನಾಡಿ, ಶಿವಮೊಗ್ಗದ ನೆಲಕ್ಕೆ ವಿಶೇಷ ಶಕ್ತಿ ಇದ್ದು, ಅನೇಕ ಸಾಧನೆಗಳು ಸಾಧ್ಯವಾಗಿದೆ. ಇಂತಹ ನೆಲದ ಪ್ರೇರಣೆಯಿಂದ ಮಲೆನಾಡಿನ ಯುವ ಸಮೂಹ ಯಶಸ್ವಿ ಸಾಧಕರಾಗಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಎಚ್.ಸಿ.ಶಿವಕುಮಾರ್, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಲೆಕ್ಕಪತ್ರ ವಿಭಾಗದ ಅಧಿಕಾರಿ ಗುರುರಾಜ್, ಶಂಭುಲಿಂಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಂಯೋಜಕರಾದ ಬಿ.ವಿ.ಶ್ರೀನಿವಾಸಮೂರ್ತಿ ಮತ್ತು ಉಜ್ವಲ ನಿರೂಪಿಸಿ, ಚಂದ್ರಶೇಖರ್ ವಂದಿಸಿದರು. ಇದೇ ವೇಳೆ ಬಿಇ ಕನ್ನಡ ವಿಷಯದಲ್ಲಿ 100ಕ್ಕೇ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.